Asianet Suvarna News Asianet Suvarna News

ಕೋಚ್ ಹುದ್ದೆಗೆ ಅರ್ಜಿ ಗುಜರಾಯಿಸಲಿರುವ ಶಾಸ್ತ್ರಿ..!

ಒಂದುವೇಳೆ ರವಿಶಾಸ್ತ್ರಿ ಕೋಚ್ ಹುದ್ದೆಗೆ ಅರ್ಜಿಸಲ್ಲಿಸಿದರೆ ಅವರೇ ಟೀಂ ಇಂಡಿಯಾದ ನೂತನ ಗುರುವಾಗಲಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ.

Ravi Shastri to apply for India head coach position

ನವದೆಹಲಿ(ಜೂ.27): ಅನಿಲ್ ಕುಂಬ್ಳೆ ರಾಜೀನಾಮೆಯಿಂದ ತೆರವಾದ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಆಯ್ಕೆ ಬಯಸಿ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅರ್ಜಿ ಸಲ್ಲಿಸಲಿದ್ದಾರೆ.

ಜುಲೈ 9ರ ವರೆಗೆ ಕೋಚ್ ಅರ್ಜಿಸಲ್ಲಿಸಲು ಬಿಸಿಸಿಐ ಕಾಲಾವಕಾಶ ನೀಡಿತ್ತು. ಹೀಗಾಗಿ ನಿರೀಕ್ಷೆಯಂತೆಯೇ ಭಾರತ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದಾರೆ.

‘ಹೌದು, ರವಿಶಾಸ್ತ್ರಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದಾರೆ. ಈ ಹುದ್ದೆಗೇರಲು ಅವರು ಬಹಳ ಉತ್ಸುಕರಾಗಿದ್ದಾರೆ’ ಎಂದು ಶಾಸ್ತ್ರಿಯವರ ಆಪ್ತ ಮೂಲವೊಂದು ತಿಳಿಸಿದೆ.

ಈ ಮೊದಲು ಕೋಚ್ ಸ್ಥಾನ ನೀಡುವುದಾದರೆ ಮಾತ್ರ ತಾನು ಶಾಸ್ತ್ರಿ ಅರ್ಜಿ ಸಲ್ಲಿಸುವುದಾಗಿ ಶಾಸ್ತ್ರಿ ಹೇಳಿದ್ದರು ಎಂದು ವರದಿಯಾಗಿತ್ತು. ಆದರೆ ಈ ವರದಿಗಳನ್ನು ಶಾಸ್ತ್ರಿ ತಳ್ಳಿಹಾಕಿದ್ದು, ತಾವು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದ್ದಾರೆ.

2014ರ ಆಗಸ್ಟ್‌'ನಿಂದ ಜೂನ್ 2016ರ ವರೆಗೂ ಭಾರತ ತಂಡದ ನಿರ್ದೇಶಕರಾಗಿದ್ದ ರವಿಶಾಸ್ತ್ರಿ ಅವರ ಸ್ಥಾನವನ್ನು 2016ರಲ್ಲಿ ಅನಿಲ್ ಕುಂಬ್ಳೆ ಕೋಚ್ ಆಗುವ ಮೂಲಕ ತುಂಬಿದ್ದರು. ಸದ್ಯ ಕುಂಬ್ಳೆ ರಾಜೀನಾಮೆಯಿಂದಾಗಿ ತೆರವುಗೊಂಡಿರುವ ಕೋಚ್ ಸ್ಥಾನವನ್ನು ಶಾಸ್ತ್ರಿ ತುಂಬುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಕೊಹ್ಲಿಗೂ ಕೂಡಾ ರವಿಶಾಸ್ತ್ರಿ ಕೋಚ್ ಆಗುವುದು ಇಷ್ಟವಿದೆ ಎಂದು ಈ ಹಿಂದೆಯೇ ವರದಿಯಾಗಿದ್ದವು. ಇದೀಗ ಒಂದುವೇಳೆ ರವಿಶಾಸ್ತ್ರಿ ಕೋಚ್ ಹುದ್ದೆಗೆ ಅರ್ಜಿಸಲ್ಲಿಸಿದರೆ ಅವರೇ ಟೀಂ ಇಂಡಿಯಾದ ನೂತನ ಗುರುವಾಗಲಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ.

Follow Us:
Download App:
  • android
  • ios