ಪ್ರಸ್ತುತ ಶ್ರೀಲಂಕಾ ತಂಡದ ಬೌಲಿಂಗ್ ಆಗಿ ಲಂಕಾ ಮಾಜಿ ಕ್ರಿಕೆಟಿಗ ಚಮಿಂದ ವಾಸ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೊಲಂಬೊ(ಆ.08): ಸತತ ಟೆಸ್ಟ್ ಪಂದ್ಯಗಳ ಸೋಲಿನಿಂದ ಕಂಗೆಟ್ಟಿರುವ ಶ್ರೀಲಂಕಾಕ್ಕೆ ಚೇತರಿಕೆ ನೀಡಲು ಲಂಕಾ ಕ್ರಿಕೆಟ್ ಮಂಡಳಿ ಮುಂದಾಗಿದ್ದು, ತಂಡಕ್ಕೆ ನೂತನ ಬೌಲಿಂಗ್ ಕೋಚ್ ಆಗಿ ರಮೇಶ್ ರತ್ನಾಯಕೆ ಅವರನ್ನು ನೇಮಕ ಮಾಡಲಾಗಿದೆ.
ಶ್ರೀಲಂಕಾದ ಮಾಜಿ ವೇಗದ ಬೌಲರ್ ರುಮೇಶ್ ರತ್ನಾಯಕೆ ಅವರನ್ನು ಶ್ರೀಲಂಕಾ ಕ್ರಿಕೆಟ್ ತಂಡದ ನೂತನ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ ಎಂದು ಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. ಈ ಹಿಂದೆ ಇದ್ದ ಚಂಪಕಾ ರಾಮನಾಯಕೆ ಬದಲು 53 ವರ್ಷ ವಯಸ್ಸಿನ ರತ್ನಾಯಕೆ, ಅವರನ್ನು ನೇಮಿಸಲಾಗಿದೆ.
ತವರಿನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ಈಗಾಗಲೇ ಮೊದಲ 2 ಪಂದ್ಯಗಳನ್ನು ಸೋತಿದೆ. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯದಲ್ಲಾದರೂ ಲಂಕಾ ಕಮ್'ಬ್ಯಾಕ್ ಮಾಡುವ ಉದ್ದೇಶದಿಂದ ಕ್ರಿಕೆಟ್ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.
ರತ್ನಾಯಕೆ ಭಾರತ ವಿರುದ್ಧದ 1985/86 ರಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ಪಂದ್ಯವೊಂದರಲ್ಲಿ ಶ್ರೀಲಂಕಾ ಪರ 9 ವಿಕೆಟ್ ಪಡೆದಿದ್ದಲ್ಲದೇ, ಸರಣಿಯಲ್ಲಿ 20 ವಿಕೆಟ್ ಪಡೆದು ಲಂಕಾ ಸರಣಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು 2015ರ ಏಕದಿನ ವಿಶ್ವಕಪ್ ವೇಳೆ ಶ್ರೀಲಂಕಾ ತಂಡದ ಸಹಾಯಕ ವೇಗದ ಬೌಲಿಂಗ್ ಕೋಚ್ ಆಗಿಯೂ ರತ್ನಾಯಕೆ ಕಾರ್ಯನಿರ್ವಹಿಸಿದ್ದಾರೆ.
ಪ್ರಸ್ತುತ ಶ್ರೀಲಂಕಾ ತಂಡದ ಬೌಲಿಂಗ್ ಆಗಿ ಲಂಕಾ ಮಾಜಿ ಕ್ರಿಕೆಟಿಗ ಚಮಿಂದ ವಾಸ್ ಕಾರ್ಯ ನಿರ್ವಹಿಸುತ್ತಿದ್ದಾರೆ.
