ಇಲ್ಲಿನ ನವುಲೆ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕಕ್ಕೆ, ಟೀಂ ಇಂಡಿಯಾಗೆ ಆಯ್ಕೆಯಾಗಿರುವ ವೇಗಿ ಮೊಹಮ್ಮದ್ ಸಿರಾಜ್ ಮಾರಕವಾಗಿ ಪರಿಣಮಿಸಿದರು. ಅಸ್ಸಾಂ ವಿರುದ್ಧ ಶತಕ ಬಾರಿಸಿದ್ದ ಸಮರ್ಥ್, ಕರ್ನಾಟಕ ತಂಡ ಕೂಡಿಕೊಂಡಿರುವ ಕೆ.ಎಲ್ ರಾಹುಲ್, ಮಯಾಂಕ್ ಅಗರ್'ವಾಲ್ ನಿರಾಸೆ ಮೂಡಿಸಿದರು.
ಶಿವಮೊಗ್ಗ(ಅ.24): ಮಲೆನಾಡಿನಲ್ಲಿ ಕ್ರಿಕೆಟ್ ಕಲರವ ಆರಂಭವಾಗಿದೆ. ಹೈದರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ದಾಳಿಗೆ ತತ್ತರಿಸಿದ ಕರ್ನಾಟಕ ಕೇವಲ 183 ರನ್'ಗಳಿಗೆ ಸರ್ವಪತನ ಕಂಡಿದೆ. ಇದಕ್ಕುತ್ತರವಾಗಿ ಹೈದರಾಬಾದ್ 51 ರನ್'ಗಳಿಗೆ 3 ವಿಕೆಟ್ ಕಳೆದು ಕೊಂಡಿದೆ. ಇದಿಷ್ಟು ಮೊದಲ ದಿನದ ಹೈಲೆಟ್ಸ್.
ಇಲ್ಲಿನ ನವುಲೆ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕಕ್ಕೆ, ಟೀಂ ಇಂಡಿಯಾಗೆ ಆಯ್ಕೆಯಾಗಿರುವ ವೇಗಿ ಮೊಹಮ್ಮದ್ ಸಿರಾಜ್ ಮಾರಕವಾಗಿ ಪರಿಣಮಿಸಿದರು. ಅಸ್ಸಾಂ ವಿರುದ್ಧ ಶತಕ ಬಾರಿಸಿದ್ದ ಸಮರ್ಥ್, ಕರ್ನಾಟಕ ತಂಡ ಕೂಡಿಕೊಂಡಿರುವ ಕೆ.ಎಲ್ ರಾಹುಲ್, ಮಯಾಂಕ್ ಅಗರ್'ವಾಲ್ ನಿರಾಸೆ ಮೂಡಿಸಿದರು. ಟೀಂ ಇಂಡಿಯಾದ ಸ್ಟಾರ್ ಆಟಗಾರ ರಾಹುಲ್ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟುಕೊಳ್ಳಲಾಗಿತ್ತು. ಆದರೆ ರಾಹುಲ್ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಒಂದು ಹಂತದಲ್ಲಿ 86 ರನ್'ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕರ್ನಾಟಕಕ್ಕೆ ಸ್ಟುವರ್ಟ್ ಬಿನ್ನಿ ಆಸರೆಯಾದರು. ಕೆಲಹೊತ್ತು ಕರಣ್ ನಾಯರ್(23) ಸಾಥ್ ನೀಡಿದರು. ಬಿನ್ನಿ 61 ರನ್ ಬಾರಿಸಿ ಸಿರಾಜ್'ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಕರ್ನಾಟಕ 183 ರನ್'ಗಳಿಗೆ ಸರ್ವಪತನ ಕಂಡಿತು. ಹೈದರಾಬಾದ್ ಪರ ಸಿರಾಜ್ 4 ವಿಕೆಟ್ ಕಬಳಿಸಿದರೆ, ರವಿ ಕಿರಣ್ 3, ಪ್ರಗ್ಯಾನ್ ಓಜಾ 2 ಹಾಗೂ ಆಶೀಸ್ ರೆಡ್ಡಿ 1 ವಿಕೆಟ್ ಕಿತ್ತರು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಹೈದರಾಬಾದ್ ಬ್ಯಾಟಿಂಗ್ ಕೂಡಾ ಅಷ್ಟೇನು ಉತ್ತಮವಾಗಿರಲಿಲ್ಲ. ತಂಡದ ಮೊತ್ತ 3 ರನ್'ಗಳಿದ್ದಾಗ ಮಯಾಂಕ್ ಅಗರ್'ವಾಲ್ ಅವರ ಅದ್ಭುತ ಕ್ಷೇತ್ರರಕ್ಷಣೆಗೆ ತನ್ಮಯ್ ಅಗರ್'ವಾಲ್ ಪೆವಿಲಿಯನ್ ಸೇರಿದರು. ಆರಂಭದಲ್ಲೇ ಮೊದಲ ವಿಕೆಟ್ ಕಳೆದುಕೊಂಡ ಹೈದರಾಬಾದ್ ಬಳಿಕ ರಕ್ಷಣಾತ್ಮಕ ಆಟಕ್ಕೆ ಮೊರೆಹೋಯಿತು. ಎರಡನೇ ವಿಕೆಟ್'ಗೆ ಅಕ್ಷತ್ ರೆಡ್ಡಿ ಹಾಗೂ ಕೊಲ್ಲ ಸುಮಂತ್ 45 ರನ್'ಗಳ ಜೊತೆಯಾಟವಾಡಿದರು. ಈ ವೇಳೆ ದಾಳಿಗಿಳಿದ ಕಳೆದ ಪಂದ್ಯದ ಹೀರೋ ಕೆ ಗೌತಮ್ 2 ಓವರ್'ಗಳ ಅಂತರದಲ್ಲಿ 2 ವಿಕೆಟ್ ಕಬಳಿಸಿ ಹೈದರಾಬಾದ್'ಗೆ ಶಾಕ್ ನೀಡಿದ್ದು ಮಾತ್ರವಲ್ಲದೇ ಕರ್ನಾಟಕಕ್ಕೆ ಅಲ್ಪ ಮೇಲುಗೈ ತಂದುಕೊಡುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ: ಮೊದಲ ಇನಿಂಗ್ಸ್: 183/10
ಸ್ಟುವರ್ಟ್ ಬಿನ್ನಿ: 61
ಕರುಣ್ ನಾಯರ್: 23
ಮೊಹಮ್ಮದ್ ಸಿರಾಜ್: 42/4
ಹೈದರಾಬಾದ್: ಮೊದಲ ಇನಿಂಗ್ಸ್: 51/3
ಕೊಲ್ಲ ಸುಮಂತ್: 34*
ಅಕ್ಷತ್ ರೆಡ್ಡಿ: 13
ಕೆ. ಗೌತಮ್: 22/2
(ಮೊದಲ ದಿನದ ಮುಕ್ತಾಯಕ್ಕೆ)
