ನಾಗ್ಪುರ(ಫೆ.05): ಅಕ್ಷಯ್‌ ಕರ್ನೇವಾರ್‌ ಹೋರಾಟದ ಇನ್ನಿಂಗ್ಸ್‌ ಹಾಗೂ ಲೆಗ್‌ ಸ್ಪಿನ್ನರ್‌ ಆದಿತ್ಯ ಸರ್ವಾಟೆ ಆಕರ್ಷಕ ಬೌಲಿಂಗ್‌ ಪ್ರದರ್ಶನದ ನೆರವಿನಿಂದ, ಇಲ್ಲಿ ನಡೆಯುತ್ತಿರುವ 2018-19ರ ಸಾಲಿನ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ತಂಡಕ್ಕೆ, ಹಾಲಿ ಚಾಂಪಿಯನ್‌ ವಿದರ್ಭ ತಿರುಗೇಟು ನೀಡಿದೆ. ಮೊದಲ ದಿನದಂತ್ಯಕ್ಕೆ 200 ರನ್‌ಗೆ 7 ವಿಕೆಟ್‌ ಕಳೆದುಕೊಂಡಿದ್ದ ವಿದರ್ಭ, 2ನೇ ದಿನವಾದ ಸೋಮವಾರ ಆ ಮೊತ್ತಕ್ಕೆ 112 ರನ್‌ ಸೇರಿಸಿತು.

312 ರನ್‌ಗಳನ್ನು ಬಿಟ್ಟುಕೊಟ್ಟು ಹಿನ್ನಡೆ ಅನುಭವಿಸಿದ ಸೌರಾಷ್ಟ್ರ ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ್ದು 2ನೇ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 158 ರನ್‌ ಗಳಿಸಿದ್ದು ಇನ್ನೂ 154 ರನ್‌ ಹಿನ್ನಡೆಯಲ್ಲಿದೆ. ವಿಕೆಟ್‌ ಕೀಪರ್‌ ಸ್ನೆಲ್‌ ಪಟೇಲ್‌ 87 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದು, ಸೌರಾಷ್ಟ್ರಕ್ಕೆ ಮೊದಲ ಇನ್ನಿಂಗ್ಸ್‌ ಮುನ್ನಡೆ ಒದಗಿಸುವ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ.

ಹಾರ್ವಿಕ್‌ ದೇಸಾಯಿ(10) ವಿಕೆಟ್‌ ಕಳೆದುಕೊಂಡ ಸೌರಾಷ್ಟ್ರ ಆರಂಭಿಕ ಆಘಾತ ಎದುರಿಸಿತು. ವಿಶ್ವರಾಜ್‌ ಜಡೇಜಾ (18), ಪಟೇಲ್‌ ಜತೆ ಉತ್ತಮ ಜೊತೆಯಾಟ ನಿರ್ವಹಿಸಿದರು. ಚೇತೇಶ್ವರ್‌ ಪೂಜಾರ (01) ವಿಕೆಟ್‌ ಕಬಳಿಸಿದ್ದು ವಿದರ್ಭ ಆತ್ಮವಿಶ್ವಾಸ ಹೆಚ್ಚಿಸಿತು. ಆದಿತ್ಯ ಸರ್ವಾಟೆ 3 ವಿಕೆಟ್‌ ಕಿತ್ತು ತಂಡಕ್ಕೆ ಆಸರೆಯಾದರು. ಅರ್ಪಿತ್‌ ವಸವಾಡ (13) ಹಾಗೂ ಶೆಲ್ಡನ್‌ ಜಾಕ್ಸನ್‌ (09) ಸಹ ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆಲ್ರೌಂಡರ್‌ ಪ್ರೇರಕ್‌ ಮಂಕಡ್‌ (16), ಪಟೇಲ್‌ ಜತೆ 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮುನ್ನ ಕರ್ನೇವಾರ್‌ ಹಾಗೂ ಅಕ್ಷಯ್‌ ವಾಖರೆ (34) ವಿದರ್ಭ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಉಮೇಶ್‌ ಯಾದವ್‌ (13), ರಜ್ನೀಶ್‌ ಗುರ್ಬಾನಿ(06) ರನ್‌ ಕೊಡುಗೆ ನೀಡಿದರು. 160 ಎಸೆತ ಎದುರಿಸಿದ ಕರ್ನೇವಾರ್‌ 8 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 73 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಸ್ಕೋರ್‌:

ವಿದರ್ಭ 312/10 (ಕರ್ನೇವಾರ್‌ 73, ವಾಡ್ಕರ್‌ 45, ಉನಾದ್ಕತ್‌ 3-54),

ಸೌರಾಷ್ಟ್ರ 158/5 (ಸ್ನೆಲ್‌ ಪಟೇಲ್‌ 87*, ಆದಿತ್ಯ 3-55)