ವಡೋದರಾ(ಜ.09): 2018-19ರ ರಣಜಿ ಟ್ರೋಫಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ಕರ್ನಾಟಕ ಇತರ ತಂಡಗಳ ಫಲಿತಾಂಶಕ್ಕಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಬರೋಡಾ ವಿರುದ್ಧ 2 ವಿಕೆಟ್‌ ಸೋಲು ಅನುಭವಿಸಿದ್ದು. ಸೋಮವಾರ ಆರಂಭಗೊಂಡಿದ್ದ 4 ದಿನಗಳ ಪಂದ್ಯ, ಮಂಗಳವಾರವೇ ಮುಕ್ತಾಯಗೊಂಡಿತು. ಕರ್ನಾಟಕ ರೋಚಕ ಗೆಲುವು ಸಾಧಿಸುವ ಅವಕಾಶವನ್ನು ಕೈಚೆಲ್ಲಿತು.

ಮೊದಲ ದಿನ 22 ವಿಕೆಟ್‌ ವಿಕೆಟ್‌ ಪತನಗೊಂಡರೆ, 2ನೇ ದಿನ 16 ವಿಕೆಟ್‌ಗಳು ಬಿದ್ದವು. 2 ವಿಕೆಟ್‌ ನಷ್ಟಕ್ಕೆ 13 ರನ್‌ಗಳಿಂದ 2ನೇ ದಿನ ಬ್ಯಾಟಿಂಗ್‌ ಮುಂದುವರಿಸಿದ ಕರ್ನಾಟಕ, ಕೆ.ವಿ.ಸಿದ್ಧಾರ್ಥ್(64) ಹಾಗೂ ನಾಯಕ ಮನೀಶ್‌ ಪಾಂಡೆ (50) ಅರ್ಧಶತಕಗಳ ನೆರವಿನಿಂದ 2ನೇ ಇನ್ನಿಂಗ್ಸ್‌ನಲ್ಲಿ 220 ರನ್‌ ಗಳಿಸಿತು. ಶ್ರೇಯಸ್‌ ಗೋಪಾಲ್‌ (29), ಬಿ.ಆರ್‌.ಶರತ್‌ (22), ಜೆ.ಸುಚಿತ್‌ (18) ತಕ್ಕಮಟ್ಟಿಗಿನ ರನ್‌ ಕೊಡುಗೆ ನೀಡಿದರು. ಭಾರ್ಗವ್‌ ಭಟ್‌ ಹಾಗೂ ದೀಪಕ್‌ ಹೂಡಾ ತಲಾ 5 ವಿಕೆಟ್‌ ಕಬಳಿಸಿದರು.

ಗೆಲುವಿಗೆ 110 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಲು ಇಳಿದ ಬರೋಡಾ, ಆರಂಭಿಕ ಆಘಾತ ಅನುಭವಿಸಿತು. 59 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಯೂಸುಫ್‌ ಪಠಾಣ್‌ ಆಸರೆಯಾದರು. 30 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ನೊಂದಿಗೆ 41 ರನ್‌ ಸಿಡಿಸಿದ ಪಠಾಣ್‌ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಪಠಾಣ್‌ ವಿಕೆಟ್‌ ಪತನಗೊಂಡಾಗ ತಂಡದ ಮೊತ್ತ 7 ವಿಕೆಟ್‌ ನಷ್ಟಕ್ಕೆ 89 ರನ್‌. ಗೆಲುವಿಗೆ 21 ರನ್‌ ಬೇಕಿದ್ದವು. 90 ರನ್‌ಗೆ 8ನೇ ವಿಕೆಟ್‌ ಸಹ ಪತನಗೊಂಡಿತು. ಆದರೆ ಭಾರ್ಗವ್‌(9) ಹಾಗೂ ರಿಶಿ ಅರೋಠೆ (12) ತಲಾ ಒಂದು ಸಿಕ್ಸರ್‌ ಬಾರಿಸಿ, ಬರೋಡಾ ರೋಚಕ ಗೆಲುವಿನೊಂದಿಗೆ ಕ್ವಾರ್ಟರ್‌ ಫೈನಲ್‌ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವಂತೆ ಮಾಡಿದರು.

8 ಪಂದ್ಯಗಳ ಮುಕ್ತಾಯಕ್ಕೆ ಕರ್ನಾಟಕ 27 ಅಂಕಗಳೊಂದಿಗೆ 2ನೇ ಸ್ಥಾನದಲ್ಲೇ ಮುಂದುವರಿದಿದೆ. ಬರೋಡಾ 8 ಪಂದ್ಯಗಳಿಂದ 26 ಅಂಕ ಪಡೆದಿದ್ದು ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ಎರಡೂ ತಂಡಗಳ ಕ್ವಾರ್ಟರ್‌ ಫೈನಲ್‌ ಭವಿಷ್ಯ ಉಳಿದ ಪಂದ್ಯಗಳ ಫಲಿತಾಂಶಗಳ ಮೇಲೆ ನಿಂತಿದೆ. ಸದ್ಯದ ಮಟ್ಟಿಗೆ ಕರ್ನಾಟಕ ತಂಡ ಅಂತಿಮ 8ರ ಸುತ್ತಿಗೆ ಪ್ರವೇಶಿಸುವ ಸಾಧ್ಯತೆ ಪ್ರಬಲವಾಗಿದ್ದು, ಸೆಮಿಫೈನಲ್‌ ಸ್ಥಾನ ಗಿಟ್ಟಿಸಿಕೊಳ್ಳಲು ಬಲಿಷ್ಠ ರಾಜಸ್ಥಾನವನ್ನು ಎದುರಿಸಬೇಕಾಗಬಹುದು.

ಸ್ಕೋರ್‌: ಕರ್ನಾಟಕ 112 ಹಾಗೂ 220, ಬರೋಡಾ 223 ಹಾಗೂ 110/8