ರಾಜ್’ಕೋಟ್[ಡಿ.08]: ಕರ್ನಾಟಕದ ಸ್ಪಿನ್ನರ್’ಗಳ ದಾಳಿಗೆ ತತ್ತರಿಸಿದ ಸೌರಾಷ್ಟ್ರ ಎರಡನೇ ಇನ್ನಿಂಗ್ಸ್’ನಲ್ಲಿ ಕೇವಲ 79 ರನ್’ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಕರ್ನಾಟಕಕ್ಕೆ ಗೆಲ್ಲಲು 179 ರನ್’ಗಳ ಸವಾಲಿನ ಗುರಿ ನೀಡಿದೆ. ಇನ್ನು ಗುರಿ ಬೆನ್ನತ್ತಿದ ಕರ್ನಾಟಕ ಮೊದಲ ಎಸೆತದಲ್ಲೇ ಆರ್.ಸಮರ್ಥ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಎರಡನೇ ದಿನದಂತ್ಯಕ್ಕೆ ಕರ್ನಾಟಕ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿ 99 ರನ್’ಗಳ ಮುನ್ನಡೆ ಸಾಧಿಸಿದ್ದ ಸೌರಾಷ್ಟ್ರ ಮೂರನೇ ದಿನ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ನಿರಾಸೆ ಅನುಭವಿಸಿತು. ಟೂರ್ನಿಯುದ್ಧಕ್ಕೂ ಗಮನಾರ್ಹ ಪ್ರದರ್ಶನ ತೋರುತ್ತಿರುವ ಜೆ. ಸುಚಿತ್ ಇಂದು ಮತ್ತೆ ಸೌರಾಷ್ಟ್ರಕ್ಕೆ ಕಂಠಕವಾಗಿ ಪರಿಣಮಿಸಿದರು.

ಸುಚಿತ್ ಅಗ್ರ ಕ್ರಮಾಂಕದ ಬ್ಯಾಟ್ಸ್’ಮನ್’ಗಳಿಗೆ ಶಾಕ್ ನೀಡಿದರೆ, ಪವನ್ ದೇಶ್’ಪಾಂಡೆ ಹಾಗೂ ಶ್ರೇಯಸ್ ಗೋಪಾಲ್ ಸೌರಾಷ್ಟ್ರದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು. ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸ್ನೆಲ್ ಪಟೇಲ್[22], ಅವಿ ಬಾರೋಟ್[10] ಹಾಗೂ ಅರ್ಪಿತ್ ವಸುವಾಡ[13] ಹೊರತು ಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ಕೂಡ ಎರಡಂಕಿ ಮೊತ್ತ ಮುಟ್ಟಲಿಲ್ಲ.

ಕರ್ನಾಟಕ ಪರ ಜೆ. ಸುಚಿತ್, ಪವನ್ ದೇಶ್’ಪಾಂಡೆ ಹಾಗೂ ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಪಡೆದರೆ, ಅಭಿಮನ್ಯು ಮಿಥುನ್ ಒಂದು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್:
ಸೌರಾಷ್ಟ್ರ: 316 & 79/10
ಕರ್ನಾಟಕ: 217 & 1/1*
(* ವಿವರ ಅಪೂರ್ಣ]