ಮೈಸೂರು[ಡಿ.01]: ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಸಂಘಟಿತ ಪ್ರದರ್ಶನ ತೋರಿದ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡವು ಮಹರಾಷ್ಟ್ರ ಎದುರು 7 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪ್ರಸಕ್ತ ಆವೃತ್ತಿಯ ಟೂರ್ನಿಯಲ್ಲಿ ಕರ್ನಾಟಕ ಚೊಚ್ಚಲ ಜಯ ದಾಖಲಿಸಿದೆ.

ಮಹರಾಷ್ಟ್ರ ತಂಡವು ವಿನಯ್ ಪಡೆಗೆ ಗೆಲ್ಲಲು 184 ರನ್’ಗಳ ಸವಾಲಿನ ಗುರಿ ನೀಡಿತ್ತು. ಮೂರನೇ ದಿನದಂತ್ಯಕ್ಕೆ ಕರ್ನಾಟಕ ವಿಕೆಟ್ ನಷ್ಟವಿಲ್ಲದೇ 54 ರನ್ ಬಾರಿಸಿತ್ತು. ಕೊನೆಯ ದಿನ ಗೆಲ್ಲಲು 130 ರನ್’ಗಳ ಅವಶ್ಯಕತೆಯಿತ್ತು. ನಾಲ್ಕನೇ ದಿನವೂ ಕರ್ನಾಟಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಕರ್ನಾಟಕ ಪರ ರಣಜಿ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ 18 ವರ್ಷದ ದೇವದತ್ತ ಪಡಿಕಲ್[77] ಚೊಚ್ಚಲ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಡಿ. ನಿಶ್ಚಲ್[61] ಎಚ್ಚರಿಕೆಯ ಆಟವಾಡಿ ಅರ್ಧಶತಕ ಪೂರೈಸಿದರು. ಮೊದಲ ವಿಕೆಟ್’ಗೆ ಈ ಜೋಡಿ 121 ರನ್’ಗಳ ಜತೆಯಾಟವಾಡಿತು. ಶತಕದತ್ತ ಮುನ್ನುಗ್ಗುತ್ತಿದ್ದ ಪಡಿಕ್ಕಲ್[77] ಬಚ್ಚವ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಕೆ. ಸಿದ್ದಾರ್ಥ್ ಕೂಡಾ ಕೇವಲ 4 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಬ್ಬಾಸ್[34*] ಹಾಗೂ ಪವನ್ ದೇಶ್’ಪಾಂಡೆ ಎಚ್ಚರಿಕೆ ಆಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಮಹರಾಷ್ಟ್ರ ಮೊದಲ ಇನ್ನಿಂಗ್ಸ್’ನಲ್ಲಿ 113 ಹಾಗೂ 2ನೇ ಇನ್ನಿಂಗ್ಸ್’ನಲ್ಲಿ 256 ರನ್ ಗಳಿಸಿತ್ತು. ಈ ಗೆಲುವಿನೊಂದಿಗೆ ಕರ್ನಾಟಕ ಆಡಿದ 3 ಮೂರು ಪಂದ್ಯಗಳಲ್ಲಿ 2 ಡ್ರಾ ಹಾಗೂ ಒಂದು ಗೆಲುವಿನೊಂದಿಗೆ 12 ಅಂಕ ಕಲೆಹಾಕಿದೆ. ಇನ್ನು ಕರ್ನಾಟಕ ತಂಡವು ಡಿಸೆಂಬರ್ 06ರಂದು ರಾಜ್’ಕೋಟ್’ನಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್:

ಮಹರಾಷ್ಟ್ರ: 113& 256

ಕರ್ನಾಟಕ: 186& 184/3