Asianet Suvarna News Asianet Suvarna News

ಆಟಕ್ಕಾಗಿ ಪಾಠ ಕಟ್!

- ಮುಂದಿನ ವರ್ಷದಿಂದ ಶಾಲಾ ಪಠ್ಯಕ್ರಮದಲ್ಲಿ ಶೇ.50 ರಷ್ಟು ಕಡಿತ

-ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಘೋಷಣೆ 

- 2019 ನೇ ಸಾಲಿನಿಂದ ಹೊಸ ಪದ್ಧತಿ ಜಾರಿ

- ಎಲ್ಲಾ ಶಾಲೆಗಳಲ್ಲೂ ಆಟದ ಅವಧಿ ಕಡ್ಡಾಯ

Rajyavardhan Singh Rathore hints at reduction of school syllabus by 50 % for sports
Author
Bengaluru, First Published Aug 7, 2018, 9:06 AM IST

ನವದೆಹಲಿ (ಆ. 08): ದೇಶದಲ್ಲಿ ಕ್ರೀಡಾಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಮಹತ್ವದ ಯೋಜನೆ ಕೈಗೆತ್ತಿಕೊಳ್ಳುತ್ತಿದೆ.

ಮುಂದಿನ ವರ್ಷದಿಂದ ಶಾಲಾ ಪಠ್ಯಕ್ರಮದಲ್ಲಿ ಶೇ.50 ರಷ್ಟು ಕಡಿತಗೊಳಿಸಿ, ಆಟದ ಅವಧಿಗಳನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್
ಸೋಮವಾರ ಘೋಷಿಸಿದರು.

‘ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಯಾವ ಹಂತಕ್ಕೆ ಬಂದಿದೆ ಎಂದರೆ, ಕ್ರೀಡಾ ಶಿಕ್ಷಣವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಶಿಕ್ಷಣದ ಒಂದು ಭಾಗವಾಗಿ ಕ್ರೀಡೆ ಇದೆ. ಆದರೆ ಕ್ರೀಡೆಯನ್ನೇ ಶಿಕ್ಷಣವಾಗಿ ಕಲಿಸಬೇಕಿದೆ. ಶಿಕ್ಷಣ ಸಚಿವಾಲಯ 2019 ರಿಂದ ಶಾಲಾ ಪಠ್ಯ ಕ್ರಮದಲ್ಲಿ ಶೇ.50 ರಷ್ಟನ್ನು ಕಡಿತಗೊಳಿಸುವ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದೆ. ಆಟದ ಅವಧಿಗಳನ್ನು ನಿಯಮಿತವಾಗಿ ನಡೆಸಬೇಕು ಎನ್ನುವ ಆದೇಶವನ್ನೂ ನೀಡಲಾಗುತ್ತದೆ’ ಎಂದು ರಾಥೋಡ್ ಹೇಳಿದರು.

ಇದಕ್ಕೂ ಮೊದಲು ಫೆಬ್ರವರಿಯಲ್ಲೇ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಹಾಗೂ ತರಬೇತಿ ಮಂಡಳಿ (ಎನ್ಸಿಇಆರ್‌ಟಿ) 2019 ರಿಂದ ಶಾಲಾ ಪಠ್ಯಕ್ರಮವನ್ನು ಅರ್ಧದಷ್ಟು ಕಡಿತ ಗೊಳಿಸಲಿದೆ ಎಂದು ಘೋಷಿಸಿದ್ದರು. ‘ಕೌಶಲ್ಯಗಳ ಅಭಿವೃದ್ಧಿಯ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕಾಗುತ್ತದೆ. ಶಾಲಾ ಪಠ್ಯಕ್ರಮವನ್ನು ಅರ್ಧದಷ್ಟು ಇಳಿಸಲು ಎನ್‌ಸಿಇಆರ್‌ಟಿಗೆ ತಿಳಿಸಿದ್ದೇನೆ. 2019 ರ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದೆ’ ಎಂದು ಜಾವ್ಡೇಕರ್ ಸಂದರ್ಶನವೊಂದರಲ್ಲಿ ಹೇಳಿದ್ದರು

ಸದ್ಯದ ವ್ಯವಸ್ಥೆ ಹೇಗಿದೆ?:

ಶಾಲಾ ಪಠ್ಯಕ್ರಮ ಪದವಿ ಶಿಕ್ಷಣಕ್ಕಿಂತಲೂ ಹೆಚ್ಚಿದೆ ಎಂದು ಸಚಿವ ಪ್ರಕಾಶ್ ಜಾವ್ಡೇಕರ್ ಅವರೇ ಈ ಹಿಂದೆ ಹೇಳಿದ್ದರು. ಶಾಲಾ ಮಕ್ಕಳಲ್ಲಿ ಅಂಕಗಳಿಗೆ ಸ್ಪರ್ಧೆ ಹೆಚ್ಚಾಗುತ್ತಿದ್ದು, ಕ್ರೀಡೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಬಹುತೇಕ ಶಾಲೆಗಳಲ್ಲಿ ಆಟದ ಅವಧಿಗಳನ್ನು ಮೊಟಕುಗೊಳಿಸಲಾಗುತ್ತಿದೆ ಎನ್ನುವ ಆರೋಪ ಸಹ ಇದೆ. ಶಿಕ್ಷಣ ವ್ಯವಸ್ಥೆ ಬದಲಾಗಬೇಕೆಂದು ಬಹಳ ವರ್ಷಗಳಿಂದ ಸಲಹೆಗಳು ಕೇಳಿ ಬರುತ್ತಿದ್ದರೂ ಕೇಂದ್ರ ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ಸರ್ಕಾರ ಕೈಗೆತ್ತಿಕೊಳ್ಳುತ್ತಿರುವ ಯೋಜನೆಗಳಿಗೆ ಕ್ರೀಡಾ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Follow Us:
Download App:
  • android
  • ios