"ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಪೂರ್ಣ ಸಾಮರ್ಥ್ಯದ ತಂಡವನ್ನು ಕಳುಹಿಸಲು ನಿರ್ಧರಿಸಿದ್ದಾರೆ. ಆದರೆ, ಆಡುವ 11 ಮಂದಿಯ ತಂಡದಲ್ಲಿ ಪ್ರಯೋಗ ಮಾಡಬಹುದೆಂದು ಆಶಿಸುತ್ತೇನೆ... ಇಂಥ ಪ್ರಯೋಗ ಮಾಡದೇ ಇದ್ದರೆ ಮುಂದೆ ನಿಮಗೆ ಸಂದಿಗ್ಧ ಸ್ಥಿತಿ ಎದರಾಗಬಹುದು," ಎಂದು ದ್ರಾವಿಡ್ ಎಚ್ಚರಿಸಿದ್ದಾರೆ.

ನವದೆಹಲಿ(ಜೂನ್ 20): ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಅವರನ್ನು ತಂಡದಲ್ಲಿ ಮುಂದುವರಿಸಬೇಕೋ ಬೇಡವೋ ಎಂಬುದನ್ನು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬೇಗ ನಿರ್ಧರಿಸಬೇಕು. ಇಲ್ಲದಿದ್ದರೆ ಚೆಕ್'ಮೇಟ್ ಆಗುವ ಪರಿಸ್ಥಿತಿ ಬರಬಹುದು. ಹಾಗಂತ ಮಾಜಿ ಕ್ರಿಕೆಟ್ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಎಚ್ಚರಿಸಿದ್ದಾರೆ. 2019ರ ವಿಶ್ವಕಪ್'ನ್ನು ದೃಷ್ಟಿಯಲ್ಲಿಟ್ಟುಕೊಂಡು ಧೋನಿ ಮತ್ತು ಯುವಿಯ ಅಗತ್ಯತೆಯನ್ನು ಬೇಗ ನಿರ್ಧರಿಸುವ ಅವಶ್ಯಕತೆ ಇದೆ ಎಂದು ರಾಹುಲ್ ದ್ರಾವಿಡ್ ಸಲಹೆ ನೀಡಿದ್ದಾರೆ.

"ಮುಂದಿನ ಎರಡು ವರ್ಷದಲ್ಲಿ ಧೋನಿ ಮತ್ತು ಯುವಿಯವರ ಪಾತ್ರವೇನು ಎಂಬುದನ್ನು ಅರಿತುಕೊಳ್ಳಬೇಕು. ಇಬ್ಬರಿಗೂ ಸ್ಥಾನ ನೀಡಬೇಕಾ? ಅಥವಾ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಉಳಿಸಿಕೊಳ್ಳಬೇಕಾ? ಈಗಿರುವ ಪ್ರತಿಭೆಗಳನ್ನ ಆಡಿಸಿ, ಪರಿಶೀಲಿಸಿ ಆನಂತರ ಧೋನಿ ಮತ್ತು ಯುವಿ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದಿದ್ದೀರಾ? ಆರು ತಿಂಗಳಲ್ಲಿ, ಅಥವಾ ಒಂದು ವರ್ಷದಲ್ಲಿ ಈ ಅನುಮಾನವನ್ನು ಬಗೆಹರಿಸಿಕೊಳ್ಳಬೇಕು," ಎಂದು ದ್ರಾವಿಡ್ ಹೇಳಿದ್ದಾರೆ.

"ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಪೂರ್ಣ ಸಾಮರ್ಥ್ಯದ ತಂಡವನ್ನು ಕಳುಹಿಸಲು ನಿರ್ಧರಿಸಿದ್ದಾರೆ. ಆದರೆ, ಆಡುವ 11 ಮಂದಿಯ ತಂಡದಲ್ಲಿ ಪ್ರಯೋಗ ಮಾಡಬಹುದೆಂದು ಆಶಿಸುತ್ತೇನೆ... ಇಂಥ ಪ್ರಯೋಗ ಮಾಡದೇ ಇದ್ದರೆ ಮುಂದೆ ನಿಮಗೆ ಸಂದಿಗ್ಧ ಸ್ಥಿತಿ ಎದರಾಗಬಹುದು," ಎಂದು ದ್ರಾವಿಡ್ ಎಚ್ಚರಿಸಿದ್ದಾರೆ.

"ಹೊಸಬರು ಹೇಗೆ ಆಡುತ್ತಾರೆಂಬುದು ಗೊತ್ತಿಲ್ಲ. ನಮಗೆ ಈ ಆಟಗಾರರಷ್ಟೇ ಉಳಿದಿರುವುದು. ಏನು ಮಾಡಲು ಸಾಧ್ಯವಿಲ್ಲ ಎಂದು ಆಯ್ಕೆಗಾರರು ಕೈಚೆಲ್ಲಿ ಕೂರುವ ಸ್ಥಿತಿ ಬರುತ್ತದೆ

"ಅದರ ಬದಲು, ನಾವು ಎಲ್ಲವನ್ನೂ ಪ್ರಯತ್ನಿಸಿದೆವು. ಎಲ್ಲಾ ಆಟಗಾರರನ್ನು ಆಡಿಸಿ ಪರೀಕ್ಷಿಸಿದೆವು. ಆದರೂ ಯುವಿ ಮತ್ತು ಧೋನಿಯೇ ಉತ್ತಮ ಎಂದು ಹೇಳಿದರೆ ಯಾರೂ ಕೂಡ ಅಪಸ್ವರ ಎತ್ತುವುದಿಲ್ಲ," ಎಂದು ಅಂಡರ್-19 ಕೋಚ್ ಕೂಡ ಆಗಿರುವ ದ್ರಾವಿಡ್ ತಿಳಿಸಿದ್ದಾರೆ.

ಅಶ್ವಿನ್, ಜಡೇಜಾ ಬಗ್ಗೆಯೂ...
ಯುವಿ ಮತ್ತು ಧೋನಿಯಷ್ಟೇ ಅಲ್ಲ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನೂ ತಂಡದಲ್ಲಿ ಉಳಿಸಿಕೊಳ್ಳಬೇಕೋ ಬೇಡವೋ ಎಂಬುದನ್ನು ಆದಷ್ಟೂ ಬೇಗ ಡಿಸೈಡ್ ಮಾಡಬೇಕು ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಅಶ್ವಿನ್ ಮತ್ತು ಜಡೇಜಾ ಇಬ್ಬರೂ ಬೆರಳಿನ ಸ್ಪಿನ್ನರ್'ಗಳಾದ್ದರಿಂದ ಫ್ಲ್ಯಾಟ್ ಪಿಚ್'ನಲ್ಲಿ ಯಶಸ್ಸು ಕಾಣಲು ಕಷ್ಟವಾಗುತ್ತಿದೆಯಾದ್ದರಿಂದ ಮುಂದಿನ 2-3 ವರ್ಷದಲ್ಲಿ ಅವರ ಅಗತ್ಯ ಎಷ್ಟಿದೆ ಎಂಬುದನ್ನು ಪರಿಶೀಲಿಸಬೇಕು ಎಂಬುದು ದ್ರಾವಿಡ್ ಸಲಹೆ.

"ಫ್ಲ್ಯಾಟ್ ವಿಕೆಟ್'ಗಳಲ್ಲಿ ನಾವು ಆಡಬೇಕಾಗುತ್ತದೆ. ಇದರಲ್ಲಿ ಅಶ್ವಿನ್ ಮತ್ತು ಜಡೇಜಾಗೆ ಕಷ್ಟವಾಗುತ್ತಿದೆ. ಫ್ಲ್ಯಾಟ್ ಪಿಚ್'ನಲ್ಲಿ ವಿಕೆಟ್ ತೆಗೆಯಲು ವ್ರಿಸ್ಟ್ ಸ್ಪಿನ್ನರ್'ಗಳು ಮತ್ತು ಮಿಸ್ಟರಿ ಸ್ಪಿನ್ನರ್'ಗಳಿಂದ ಸಾಧ್ಯ," ಎಂದು ಹೇಳುವ ದ್ರಾವಿಡ್ ಅವರು ಕುಲದೀಪ್ ಯಾದವ್'ಗೆ ಚಿಯರ್ ಅಪ್ ಹೇಳಿದ್ದಾರೆ.

"ಕುಲದೀಪ್ ಯಾದವ್ ಅವರನ್ನು ಆಡಿಸುತ್ತಿರುವುದು ಒಳ್ಳೆಯದು. ಅವರು ಹೆಚ್ಚೆಚ್ಚು ಪಂದ್ಯಗಳನ್ನ ಆಡುವ ಅಗತ್ಯವಿದೆ. ಅವರಿಗೆ ಸಾಮರ್ಥ್ಯದ ಜೊತೆಗೆ ನಿಗೂಢತೆ ಕೂಡ ಇದೆ," ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.