ಐಸಿಸಿ ಹಾಲ್ ಆಫ್ ಫೇಮ್‌ಗೆ ದ್ರಾವಿಡ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳ್ಳುತ್ತಿರುವ ಭಾರತದ 5ನೇ ಕ್ರಿಕೆಟಿಗ ಪಾಂಟಿಂಗ್ ಐಸಿಸಿಯ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಆಸ್ಟ್ರೇಲಿಯಾದ 25ನೇ ಕ್ರಿಕೆಟಿಗ
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ತೋರಿದ ಹಿನ್ನೆಲೆಯಲ್ಲಿ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ರನ್ನು ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸಲಾಗಿದೆ.
ಈ ಇಬ್ಬರ ಜತೆ ಇಂಗ್ಲೆಂಡ್ ಮಹಿಳಾ ತಂಡದ ಮಾಜಿ ವಿಕೆಟ್ ಕೀಪರ್ ಕ್ಲ್ಯಾರಿ ಟೇಲರ್ ಸಹ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

5ನೇ ಭಾರತೀಯ: ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳ್ಳುತ್ತಿರುವ ಭಾರತದ 5ನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ದ್ರಾವಿಡ್ ಪಾತ್ರರಾಗಿದ್ದಾರೆ. ಈ ಮುನ್ನ ಮಾಜಿ ನಾಯಕರುಗಳಾದ ಬಿಶನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್, ಕಪಿಲ್ ದೇವ್ ಹಾಗೂ ಅನಿಲ್ ಕುಂಬ್ಳೆಗೆ ಈ ಗೌರವ ಸಂದಿತ್ತು.
ಇದೇ ವೇಳೆ ಪಾಂಟಿಂಗ್ ಐಸಿಸಿಯ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಆಸ್ಟ್ರೇಲಿಯಾದ 25ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
‘ಇದು ನನ್ನ ಪಾಲಿಗೆ ಅತಿದೊಡ್ಡ ಗೌರವ. ದಿಗ್ಗಜರ ಸಾಲಿಗೆ ಸೇರ್ಪಡೆಗೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ. ವೃತ್ತಿಬದುಕಿನುದ್ದಕ್ಕೂ ಬೆಂಬಲಿಸಿದ ಕೆಎಸ್‌ಸಿಎ ಹಾಗೂ ಬಿಸಿಸಿಐಗೆ ಧನ್ಯವಾದ ಹೇಳುತ್ತೇನೆ’ ಎಂದು ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ.
ರಾಹುಲ್ 164 ಟೆಸ್ಟ್‌ಗಳಲ್ಲಿ 13,288 ರನ್, 344 ಏಕದಿನಗಳಲ್ಲಿ 10,889 ರನ್ ಗಳಿಸಿದ್ದರು.
