ಥಾಯ್ಲೆಂಡ್ ಓಪನ್: ಫೈನಲ್ ಪ್ರವೇಶಿಸಿದ ಪಿವಿ ಸಿಂಧು

First Published 15, Jul 2018, 12:37 PM IST
PV Sindhu storms into the final of Thailand Open
Highlights

2018ರ ಸಾಲಿನಲ್ಲಿ ಫೈನಲ್ ಪ್ರವೇಶಲು ವಿಫಲವಾಗಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಥಾಯ್ಲೆಂಡ್ ಓಪನ್ ಟೂರ್ನಿಯಲ್ಲಿ ಕೊರಗು ನೀಗಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಹೋರಾಟ ಹೇಗಿತ್ತು? ಇಲ್ಲಿದೆ ವಿವರ.

ಬ್ಯಾಂಕಾಕ್(ಜು.15): ರಿಯೋ ಒಲಿಂಪಿಕ್ಸ್ ಬೆಳ್ಳಿ  ಪದಕ ವಿಜೇತೆ ಸಿಂಧು, ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಸಿಂಧು, ಇಂಡೋನೇಷ್ಯಾದ ಗ್ರೆಗೋರಿಯಾ ತುಂಜುಂಗ್‌ರನ್ನು 23-21,16-21,21-9 ಗೇಮ್‌ಗಳಿಂದ ಸೋಲಿಸಿದರು.

ಪ್ರಸಕ್ತ ಋತುವಿನಲ್ಲಿ ಸಿಂಧು, ಇದೇ  ಮೊದಲ ಬಾರಿಗೆ ಟೂರ್ನಿಯೊಂದರಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಫೈನಲ್‌ನಲ್ಲಿ ಸಿಂಧುಗೆ ಜಪಾನ್‌ನ ನೋಜೋಮಿ ಓಕುಹಾರಾ ಎದುರಾಗಲಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಓಕುಹಾರಾ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಿಂಧು ಕಾತರಿಸುತ್ತಿದ್ದಾರೆ. 

ಭಾರೀ ಪೈಪೋಟಿ: ಸುಮಾರು ಒಂದು ತಾಸು ನಡೆದ ಹೋರಾಟದಲ್ಲಿ ಸಿಂಧುಗೆ ಪ್ರಬಲ ಪೈಪೋಟಿ ಎದುರಾಯಿತು. ಮೊದಲ ಗೇಮ್‌ನ ಆರಂಭದಲ್ಲಿ ಹಿನ್ನಡೆಯಲ್ಲಿದ್ದ ಸಿಂಧು, ಪುಟಿದೆದ್ದು 16-16 ರಲ್ಲಿ ಸಮಬಲ ಸಾಧಿಸಿದರು. ನಂತರ ಅದೇ ವೇಗ ಕಾಯ್ದುಕೊಂಡು ಗೇಮ್ ತಮ್ಮದಾಗಿಸಿಕೊಂಡರು. 2ನೇ ಗೇಮ್‌ಗನಲ್ಲಿ ಎಚ್ಚೆತ್ತುಕೊಂಡ ತುಂಜುನ್, 21-16  ಅಂಕಗಳಿಂದ ತಿರಗೇಟು ನೀಡಿ ಅಂತಕ ಸೃಷ್ಟಿಸಿದರು. ಆದರೆ ಅಂತಿಮ ಗೇಮ್‌ನಲ್ಲಿ ಸಿಂಧು ವೇಗಕ್ಕೆ ಸರಿಸಾಟಿಯಾಗದ ತುಂಜುಂಗ್ ವಿರುದ್ಧ ಸುಲಭವಾಗಿ ಗೇಮ್ ಗೆದ್ದು, ಪಂದ್ಯ ತಮ್ಮದಾಗಿಸಿಕೊಂಡರು.

loader