Asianet Suvarna News Asianet Suvarna News

ಡೆನ್ಮಾರ್ಕ್ ಓಪನ್: ಸಿಂಧು ಮೇಲೆ ಎಲ್ಲರ ಕಣ್ಣು

‘ಒಲಿಂಪಿಕ್ಸ್ ಕ್ರೀಡಾಕೂಟವು ನನಗೆ ಅಪಾರ ಆತ್ಮವಿಶ್ವಾಸವನ್ನು ತಂದುಕೊಟ್ಟಿತು. ಇದೇ ಭರವಸೆಯಲ್ಲೇ ಮುಂದಿನ ಟೂರ್ನಿಗಳಲ್ಲಿ ನಾನು ಆಡಲಿದ್ದೇನೆ. ಇಲ್ಲಿಂದಾಚೆಗೆ ನನ್ನ ಮೇಲಿನ ಜವಾಬ್ದಾರಿ ಹಾಗೂ ನಿರೀಕ್ಷೆಗಳು ಉನ್ನತವಾಗಿವೆ ಎಂಬುದು ನನಗೆ ಗೊತ್ತು. ಇದು ನನ್ನಲ್ಲಿ ಒತ್ತಡ ತಾರದಂತೆ ಸಹಜ ಆಟವಾಡಲು ಗಮನ ವಹಿಸುತ್ತೇನೆ.’’

ಪಿ ವಿ ಸಿಂಧು ಬ್ಯಾಡ್ಮಿಂಟನ್ ಆಟಗಾರ್ತಿ

PV Sindhu returns at Denmark Open after Rio 2016 Olympics

ಒಡೆನ್ಸಿ(ಅ.17): ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ ನಂತರ ಮೊಟ್ಟಮೊದಲ ಟೂರ್ನಿಗೆ ಅಣಿಯಾಗಿರುವ ಪಿ ವಿ ಸಿಂಧು, ಮಂಗಳವಾರದಿಂದ ಆರಂಭವಾಗುತ್ತಿರುವ ಡೆನ್ಮಾರ್ಕ್ ಓಪನ್ ಸೂಪರ್‌ ಸಿರೀಸ್ ಪ್ರೀಮಿಯರ್ ಬ್ಯಾಡಿಂಟನ್ ಪಂದ್ಯಾವಳಿಯಲ್ಲಿ ಎಲ್ಲರ ಕೇಂದ್ರಬಿಂದುವಾಗಿದ್ದಾರೆ.

ರಿಯೊ ಕೂಟದಲ್ಲಿನ ಅತ್ಯಪೂರ್ವ ಸಾಧನೆಯಿಂದಾಗಿ ಕಳೆದ ಒಂದೂವರೆ ತಿಂಗಳಿನಿಂದ ಬಿಡುವಿಲ್ಲದ ದಿನಗಳನ್ನು ಕಳೆದ ಸಿಂಧು, ಈ ಪಂದ್ಯಾವಳಿಯಷ್ಟಲ್ಲದೆ, ಫ್ರೆಂಚ್ ಓಪನ್‌ಗೂ ಒಂದಷ್ಟು ತಯಾರಿ ನಡೆಸಿದ್ದಾರೆ. ಹೀಗಾಗಿ ಈ ಎರಡೂ ಪಂದ್ಯಾವಳಿಗಳಲ್ಲಿ ಸಿಂಧು ನೀಡುವ ಪ್ರದರ್ಶನದ ಮೇಲೆ ಹೆಚ್ಚಿನ ಗಮನ ಇರಿಸಿಕೊಳ್ಳಲಾಗಿದೆ.

ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಪಡೆದಿರುವ ಸಿಂಧು, ಬುಧವಾರ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಹಿ ಬಿಂಜಿಯಾವೊ ವಿರುದ್ಧ ಸೆಣಸಲಿದ್ದಾರೆ. ಆನಂತರದಲ್ಲಿ ಆಕೆ ಥಾಯ್ಲೆಂಡ್‌ನ ರಚನಾಕ್ ಇಂಟನಾನ್, ಕೊರಿಯಾ ಆಟಗಾರ್ತಿ ಸುಂಗ್ ಜೀ ಹ್ಯುನ್ ಹಾಗೂ ಚೈನೀಸ್ ತೈಪೆಯ ಟಾಯ್ ಟ್ಸು ಯಿಂಗ್ ವಿರುದ್ಧ ಕಾದಾಡುವ ಸಾಧ್ಯತೆ ಇದೆ.

ಅಂದಹಾಗೆ ಮೊಣಕಾಲು ನೋವಿನ ಶಸಚಿಕಿತ್ಸೆಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಹೈದರಾಬಾದ್‌ನ ಮತ್ತೋರ್ವ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಈ ಟೂರ್ನಿಯಿಂದ ವಂಚಿತವಾಗಿದ್ದಾರೆ.

ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಗಳಲ್ಲಿ ಕಂಚು ಪದಕ ಗೆದ್ದಿರುವ ಸಿಂಧು, ಕಳೆದ ಸಾಲಿನಲ್ಲಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತವಾಗಿದ್ದರು. ಹೀಗಾಗಿ ಈ ಬಾರಿ ಚಾಂಪಿಯನ್ ಆಗುವತ್ತ ಗಮನ ಹರಿಸಿದ್ದಾರೆ.

ಇನ್ನು ಪುರುಷರ ವಿಭಾಗದಲ್ಲಿ ಪಾದದ ನೋವಿನಿಂದಾಗಿ ಕಿಡಾಂಬಿ ಶ್ರೀಕಾಂತ್ ಟೂರ್ನಿಗೆ ಅಲಭ್ಯವಾಗಿದ್ದರೆ, ಭಾನುವಾರವಷ್ಟೇ ಮುಗಿದ ಡಚ್ ಓಪನ್‌ನಲ್ಲಿ ರನ್ನರ್‌ಅಪ್ ಆದ ಅಜಯ್ ಜಯರಾಂ ಸ್ಪರ್ಧೆಗೆ ಅಣಿಯಾಗಿದ್ದಾರೆ. ಅಂತೆಯೇ ಸಾಯಿ ಪ್ರಣೀತ್, ಎಚ್.ಎಸ್. ಪ್ರಣಯ್ ಹಾಗೂ ಪಿ. ಕಶ್ಯಪ್ ಟೂರ್ನಿಯಲ್ಲಿ ಕಠಿಣ ಸವಾಲು ಎದುರಿಸಬೇಕಾಗಿದೆ.

Follow Us:
Download App:
  • android
  • ios