ಇಂಡೋನೇಷ್ಯಾ ಓಪನ್‌ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳು ಶುಭಾರಂಭ ಮಾಡಿದ್ದು, ಪಿವಿ ಸಿಂಧು, ಕಿದಂಬಿ ಶ್ರೀಕಾಂತ್‌ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಜಕಾರ್ತ[ಜು.18]: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌, ಬುಧವಾರ ಇಲ್ಲಿ ಆರಂಭಗೊಂಡ ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಒಂದು ತಿಂಗಳ ವಿರಾಮದ ಬಳಿಕ ಅಂಕಣಕ್ಕಿಳಿದ ಇಬ್ಬರು, ಮೊದಲ ಸುತ್ತಿನಲ್ಲಿ ಆಕರ್ಷಕ ಪ್ರದರ್ಶನ ತೋರಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸಿಂಧು, ಜಪಾನ್‌ನ ಅಯಾ ಒಹೊರಿ ವಿರುದ್ಧ 11-21, 21-15, 21-15 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಋುತುವಿನಲ್ಲಿ ಮೊದಲ ಪ್ರಶಸ್ತಿ ಗೆಲ್ಲಲು ಕಾತರಿಸುತ್ತಿರುವ ಸಿಂಧು, 2ನೇ ಸುತ್ತಿನಲ್ಲಿ ಡೆನ್ಮಾರ್ಕ್ನ ಮಿಯಾ ಬ್ಲಿಚ್‌ಫೆಲ್ಟ್‌ ವಿರುದ್ಧ ಸೆಣಸಲಿದ್ದಾರೆ. ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ವಿರುದ್ಧ 21-14, 21-13 ಗೇಮ್‌ಗಳಲ್ಲಿ ಜಯಿಸಿದ ಶ್ರೀಕಾಂತ್‌, 2ನೇ ಸುತ್ತಿನಲ್ಲಿ ಹಾಂಕಾಂಗ್‌ನ ಲಾಂಗ್‌ ಅಂಗುಸ್‌ರನ್ನು ಎದುರಿಸಲಿದ್ದಾರೆ.

ಇದೇ ವೇಳೆ ಎಚ್‌.ಎಸ್‌.ಪ್ರಣಯ್‌ ಹಾಗೂ ಬಿ.ಸಾಯಿ ಪ್ರಣೀತ್‌ ಮೊದಲ ಸುತ್ತಿನ ಪಂದ್ಯದಲ್ಲೇ ಸೋತು ಹೊರಬಿದ್ದರು. ಮಿಶ್ರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಸಾತ್ವಿಕ್‌ ಸಾಯಿರಾಜ್‌ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಸಹ ಸೋಲುಂಡು ನಿರಾಸೆ ಅನುಭವಿಸಿತು.