Asianet Suvarna News Asianet Suvarna News

ಸಿಂಧು ಸೆಮಿಗೆ; ಸೈನಾ ಮನೆಗೆ

ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡು ಕ್ವಾರ್ಟರ್‌ ಫೈನಲ್ ಹಣಾಹಣಿಯಲ್ಲಿ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಗೆಲುವು ಸಾಧಿಸಿದರೆ, ಲಂಡನ್ಸ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಸೈನಾ, ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದರು.

PV Sindhu enters semis Saina Nehwal bows out of Hong Kong Super Series

ಹಾಂಕಾಂಗ್(ನ.25): ಪ್ರತಿಷ್ಠಿತ ಹಾಂಕಾಂಗ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತಕ್ಕಿಂದು ಮಿಶ್ರ ಫಲ ಲಭಿಸಿದೆ. ದೇಶದ ಇಬ್ಬರು ಪ್ರಮುಖ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ. ಸಿಂಧು ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯು ಸ್ವಲ್ಪದರಲ್ಲೇ ಕೈತಪ್ಪಿತು.

ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡು ಕ್ವಾರ್ಟರ್‌ ಫೈನಲ್ ಹಣಾಹಣಿಯಲ್ಲಿ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಗೆಲುವು ಸಾಧಿಸಿದರೆ, ಲಂಡನ್ಸ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಸೈನಾ, ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದರು. ರಿಯೊ ಕೂಟದ ಬಳಿಕ ಸೂಪರ್ ಸಿರೀಸ್ ಟೂರ್ನಿಯಲ್ಲಿ ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್ ತಲುಪಿದ್ದ ಸೈನಾ, ಇಲ್ಲಿಂದಾಚೆಗೆ ಮುಂದುವರೆಯಲು ವಿಫಲವಾದರು.

ಇಲ್ಲಿನ ಹಾಂಕಾಂಗ್ ಕೊಲಿಸಿಯಮ್ ಕೋರ್ಟ್‌ನಲ್ಲಿ ನಡೆದ ಮೂರು ಗೇಮ್‌'ಗಳ ರೋಚಕ ಸೆಣಸಾಟದಲ್ಲಿ ಮೊದಲಿಗೆ ಸಿಂಧು ಸಿಂಗಪುರದ ಆಟಗಾರ್ತಿ ಲಿಯಾಂಗ್ ಕ್ಸಿಯಾಯು ಎದುರು 21-17, 21-23, 21-18ರಿಂದ ಗೆಲುವು ಸಾಧಿಸಿದರೆ, ಬಳಿಕ ನಡೆದ ಮತ್ತೊಂದು ಕ್ವಾರ್ಟರ್‌ ಫೈನಲ್ ಸೆಣಸಾಟದಲ್ಲಿ ಸೈನಾ ನೆಹ್ವಾಲ್ ಸ್ಥಳೀಯ ಆಟಗಾರ್ತಿ ಚೆಯುಂಗ್ ನ್ಶಾನ್ ಯಿ ಎದುರು 8-21, 21-18, 19-21ರಿಂದ ಸೋಲನುಭವಿಸಿದರು.

ಚೆಯುಂಗ್ ವಿರುದ್ಧದ ಪಂದ್ಯದಲ್ಲಿ ಸೈನಾ ಆರಂಭದಲ್ಲೇ ಮುಗ್ಗರಿಸಿದರು. ಮೊದಲ ಗೇಮ್‌'ನಲ್ಲಿ ಅತ್ಯಬ್ಬರದ ಆಟವಾಡಿದ ಆಕೆಯ ಎದುರು ದಯನೀಯ ರೀತಿಯಲ್ಲಿ ಗೇಮ್ ಕೈಚೆಲ್ಲಿದ ಸೈನಾ, ಎರಡನೇ ಗೇಮ್‌'ನಲ್ಲಿ ದಿಟ್ಟ ಆಟದೊಂದಿಗೆ ತಿರುಗಿಬಿದ್ದು ಅಂತರವನ್ನು ಸಮಸ್ಥಿತಿಗೆ ತಂದರು. ನಿರ್ಣಾಯಕವಾಗಿದ್ದ ಮೂರನೇ ಗೇಮ್‌'ನಲ್ಲಿಯೂ ಇಬ್ಬರಿಂದ ಪ್ರಖರ ಹೋರಾಟವೇ ಕಂಡುಬಂದಿತು. ಆದರೆ, ಕೊನೆ ಕೊನೆಗೆ ಸೈನಾ ಎಸಗಿದ ತಪ್ಪುಗಳಿಂದ ಲಾಭ ಪಡೆದ ಚೆಯುಂಗ್ ಸೆಮಿ ಫೈನಲ್‌ಗೆ ಧಾವಿಸಿದರು.

ಇತ್ತ, ಪುರುಷರ ವಿಭಾಗದಲ್ಲಿ ಅಜಯ್ ಜಯರಾಂ ಹೋರಾಟಕ್ಕೆ ತೆರೆಬಿದ್ದಿತು. ಹಾಂಕಾಂಗ್ ಆಟಗಾರ ಕಾ ಲಾಂಗ್ ಆ್ಯನ್ ವಿರುದ್ಧದ ಪಂದ್ಯದಲ್ಲಿ ಅವರು 15-21, 14-21ರಿಂದ ಸೋಲನುಭವಿಸಿದರೆ, ಮತ್ತೊಂದು ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಸಮೀರ್ ವರ್ಮಾ ಮಲೇಷಿಯಾ ಆಟಗಾರ ಹಾಗೂ ವಿಶ್ವದ ಮಾಜಿ ನಂ.1 ಆಟಗಾರ ಚೊಂಗ್ ವೀ ಲೋಂಗ್ ವಿರುದ್ಧ 21-17, 23-21ರ ಎರಡು ನೇರ ಗೇಮ್‌ಗಳಲ್ಲಿ ಜಯ ಪಡೆದರು

ಪ್ರಚಂಡ ಫಾರ್ಮ್‌ನಲ್ಲಿ ಸಿಂಧು

ರಿಯೊ ಒಲಿಂಪಿಕ್ಸ್ ಬಳಿಕ ಫ್ರೆಂಚ್ ಓಪನ್‌'ನಲ್ಲಿ ಭಾಗವಹಿಸಿದರೂ, ನಾಕೌಟ್ ಹಂತವನ್ನೂ ಕಾಣದೆ ನಿರಾಸೆ ಅನುಭವಿಸಿದ್ದ ಸಿಂಧು, ಆನಂತರದ ಚೀನಾ ಸೂಪರ್ ಸಿರೀಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಆದರು. ಚೊಚ್ಚಲ ಚೀನಾ ಓಪನ್ ಗೆಲ್ಲುವ ಹಂತದಲ್ಲಿನ ಕೊನೆಯ ಮೂರು ಪಂದ್ಯಗಳಲ್ಲಿಯೂ ಅತ್ಯಮೋಘ ಆಟವಾಡಿದ್ದ ಸಿಂಧು, ಇದೇ ಹೋರಾಟವನ್ನು ಹಾಂಕಾಂಗ್ ಓಪನ್‌'ನಲ್ಲಿಯೂ ಮುಂದುವರೆಸಿದ್ದಾರೆ. ಮೊದಲ ಗೇಮ್‌ನಲ್ಲಿ 4-7 ಹಿನ್ನಡೆ ಅನುಭವಿಸಿದ್ದ ಸಿಂಧು, ಬಳಿಕ ಸತತ ನಾಲ್ಕು ಪಾಯಿಂಟ್ಸ್ ಕಲೆಹಾಕಿ ತನ್ನ ಮೇಲೆ ಸಿಂಗಪುರ ಆಟಗಾರ್ತಿ ಹೇರಿದ ಒತ್ತಡವನ್ನು ಮೆಟ್ಟಿನಿಂತರು. ಆದರೆ, ಇಲ್ಲಿಂದಾಚೆಗೆ ಲಿಯಾಂಗ್ ಎಸಗಿದ ಕೆಲವೊಂದು ಪ್ರಮಾದಗಳು ಸಿಂಧುಗೆ ವರವಾದವು. ಇನ್ನು ಎರಡನೇ ಗೇಮ್‌ನಲ್ಲಿಯೂ ಸಿಂಧು ನೀರಸ ಆರಂಭ ಪಡೆದರು. 6-3ರ ಮುನ್ನಡೆಯೊಂದಿಗೆ ಸಾಗಿದ ಲಿಯಾಂಗ್, ಕ್ರಮೇಣ ಪ್ರಬಲರಾಗಿ ಬೆಳೆದರು. ಪಟ್ಟು ಬಿಡದ ಸಿಂಧು ಕಡೆಯಿಂದಲೂ ಪ್ರತಿರೋಧ ವ್ಯಕ್ತವಾಯಿತು. ಆದರೆ, ಆಕ್ರಮಣಕಾರಿ ಆಟವಾಡಿದ ಲಿಯಾಂಗ್ ಈ ಗೇಮ್ ಅನ್ನು ಗೆದ್ದು ಸಮಬಲ ಸಾಧಿಸಿದರು. ಬಳಿಕ ನಡೆದ ನಿರ್ಣಾಯಕ ಘಟ್ಟದಲ್ಲಿ ಸಿಂಧು ಮತ್ತೊಮ್ಮೆ ಕರಾರುವಾಕ್ ಆಟದಿಂದ ಲಿಯಾಂಗ್‌ಗೆ ಸೋಲುಣಿಸಿದರು.

Latest Videos
Follow Us:
Download App:
  • android
  • ios