ನವದೆಹಲಿ(ಏ. 01): ಕ್ವಾರ್ಟರ್'ಫೈನಲ್'ನಲ್ಲಿ ಸೈನಾ ನೆಹ್ವಾಲ್ ಅವರನ್ನು ಮಣಿಸಿದ್ದ ಪಿವಿ ಸಿಂಧು ಇಂದು ದಕ್ಷಿಣ ಕೊರಿಯಾದ ಸುಂಗ್ ಜಿ ಹ್ಯುನ್ ವಿರುದ್ಧ ಜಯಭೇರಿ ಭಾರಿಸಿ ಫೈನಲ್ ತಲುಪಿದ್ದಾರೆ. ಇಂದು ನಡೆದ ಇಂಡಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್'ನಲ್ಲಿ ಸಿಂಧು 21-18, 14-21, 21-14 ಗೇಮ್'ಗಳಿಂದ ಕೊರಿಯನ್ ಆಟಗಾರ್ತಿಯನ್ನು ಸೋಲಿಸಿದ್ದಾರೆ. ಭಾರತದ ನಂಬರ್ ಒನ್ ಆಟಗಾರ್ತಿಯಾಗಿರುವ ಸಿಂಧು ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದಾರೆ.

ಫೈನಲ್'ನಲ್ಲಿ ಸಿಂಧು ಅವರು ಸ್ಪೇನ್ ದೇಶದ ಕರೋಲಿನಾ ಮರಿನ್ ಅವರನ್ನು ಎದುರುಗೊಳ್ಳಲಿದ್ದಾರೆ. ಇಂದು ನಡೆದ ಮತ್ತೊಂದು ಸೆಮಿಫೈನಲ್'ನಲ್ಲಿ ಸ್ಪೇನ್ ಆಟಗಾರ್ತಿಯು ಜಪಾನ್ ಅಕಾನೆ ಯಮಾಗುಚಿ ಅವರನ್ನು 21-16, 21-14 ನೇರ ಗೇಮ್'ಗಳಿಂದ ಸೋಲಿಸಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.

ಈ ಬಾರಿಯ ಒಲಿಂಪಿಕ್ಸ್'ನಲ್ಲಿ ಸಿಂಧು ಅವರಿಗೆ ಚಿನ್ನ ಕೈತಪ್ಪಲು ಇದೇ ಕರೋಲಿನಾ ಮರಿನ್ ಕಾರಣವಾಗಿದ್ದರು. ಸಿಂಧು ಆ ಸೋಲಿನ ಸೇಡನ್ನು ತೀರಿಸಿಕೊಳ್ಳುತ್ತಾರಾ ಎಂದು ಕಾದುನೋಡಬೇಕು.