ದುಬೈ(ಫೆ.26): ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ದೇಶಗಳನ್ನು ಕ್ರಿಕೆಟ್‌ನಿಂದಲೇ ದೂರವಿಡಬೇಕು ಎಂದು ಬಿಸಿಸಿಐ ಬರೆದಿದ್ದ ಪತ್ರಕ್ಕೆ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯಿಂದ ಮನ್ನಣೆ ಸಿಗುವ ಲಕ್ಷಣಗಳು ತೋರುತ್ತಿಲ್ಲ. ಬುಧವಾರದಿಂದ ಇಲ್ಲಿ ತ್ರೈಮಾಸಿಕ ಸಭೆ ಬುಧವಾರದಿಂದ ಆರಂಭಗೊಳ್ಳಲಿದ್ದು, ಪಾಕಿಸ್ತಾನವನ್ನು ಬಹಿಷ್ಕರಿಸುವ ಕುರಿತು ಪ್ರಸ್ತಾಪವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಐಸಿಸಿ ಕಾರ್ಯನಿರ್ವಹಣೆ ಬಗ್ಗೆ ಅರಿವಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕ್ ಮೇಲೆ ಬಾಂಬ್ ದಾಳಿ: ಸೆಹ್ವಾಗ್ ಟ್ವೀಟ್ ಅದ್ಬುತ!

‘ಯಾವುದೇ ಕ್ರಿಕೆಟ್‌ ಮಂಡಳಿಯನ್ನು ಮತ್ತೊಂದು ಮಂಡಳಿಯನ್ನು ಬಹಷ್ಕರಿಸುವಂತೆ ಕೇಳುವ ಪರಿಸ್ಥಿತಿಯಲ್ಲಿ ಐಸಿಸಿ ಇಲ್ಲ. ಆ ರೀತಿ ಮಾಡಲು ಅಧಿಕಾರಿವೂ ಇಲ್ಲ. ಇದೊಂದು ರಾಜತಾಂತ್ರಿಕ ಸಮಸ್ಯೆಯಾಗಿದ್ದು, ಸರ್ಕಾರ ಈ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ. ಸದಸ್ಯ ರಾಷ್ಟ್ರಗಳು ಯಾವುದೇ ಸಮಸ್ಯೆ ಕುರಿತು ಐಸಿಸಿ ಸಭೆಗಳಲ್ಲಿ ಚರ್ಚಿಸುವ ಹಕ್ಕು ಹೊಂದಿವೆ. ಆದರೆ ಅದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ’ ಎಂದು ಹಲವು ಐಸಿಸಿ ಸಭೆಗಳಲ್ಲಿ ಪಾಲ್ಗೊಂಡಿದ್ದ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಿಯರಿಗೆ ವಿಸಾ ನಿರಾಕರಣೆ - ಬೆಂಗಳೂರು ಸ್ನೂಕರ್ ಟೂರ್ನಿ ಮುಂದೂಡಿಕೆ!

ಸುರಕ್ಷತೆ ಕುರಿತು ವಿವರ: ಬಿಸಿಸಿಐ ಸಿಇಒ ರಾಹುಲ್‌ ಜೋಹ್ರಿ ಐಸಿಸಿಗೆ ಬರೆದಿದ್ದ ಪತ್ರದಲ್ಲಿ ವಿಶ್ವಕಪ್‌ ವೇಳೆ ಭಾರತೀಯ ಆಟಗಾರರಿಗೆ, ಅಧಿಕಾರಿಗಳಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಕೋರಿದ್ದರು. ಈ ಸಂಬಂಧ, ತ್ರೈಮಾಸಿಕ ಸಭೆಯಲ್ಲಿ ಐಸಿಸಿ ಭದ್ರತೆಗಾಗಿ ಕೈಗೊಳ್ಳಲಾಗುತ್ತಿರುವ ಕ್ರಮಗಳು, ಆಟಗಾರರ ಸುರಕ್ಷತೆಗೆ ಮಾಡುತ್ತಿರುವ ವ್ಯವಸ್ಥೆಗಳ ಕುರಿತು ಸಂಪೂರ್ಣ ವಿವರ ನೀಡಲಿದೆ ಎನ್ನಲಾಗಿದೆ.