ಬೋನಸ್ ಕಾ ಬಾದ್'ಷಾ ಎಂದೇ ಕರೆಸಿಕೊಳ್ಳುವ ಅನೂಪ್ ಕುಮಾರ್ ಅವರನ್ನು ಯು ಮುಂಬಾ ತನ್ನ ತಂಡದಲ್ಲಿ ಉಳಿಸಿಕೊಂಡಿದೆ

ಮುಂಬೈ(ಮೇ.15): ಮುಂಬರುವ ಜುಲೈ ತಿಂಗಳಿಂದ ಆರಂಭವಾಗಲಿರುವ 5ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಗೆ ಸದ್ಯ ಈಗೀರುವ 8 ತಂಡಗಳ ಪೈಕಿ 7 ತಂಡಗಳು ತಲಾ ಒಬ್ಬ ಆಟಗಾರನನ್ನು ತಮ್ಮ ತಂಡದಲ್ಲೇ ಉಳಿಸಿಕೊಂಡಿದ್ದಾರೆ.

ಇದೇ 22 ಮತ್ತು 23 ರಂದು ನವದೆಹಲಿಯಲ್ಲಿ ನಡೆಯಲಿರುವ ಪ್ರೊ ಕಬಡ್ಡಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 350ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ. ಈ ಆವೃತ್ತಿಯಿಂದ ಹೊಸ 4 ತಂಡಗಳು ಸೇರ್ಪಡೆಗೊಳ್ಳುತ್ತಿವೆ.

ತಮ್ಮ ತಂಡದಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿ ಇಂತಿದೆ:

ಪಾಟ್ನಾ ಪೈರೇಟ್ಸ್ : ಕಳೆದ ಆವೃತ್ತಿಯ ಚಾಂಪಿಯನ್ ತಂಡವು 'ಡುಬ್ಕಿ ಕಿಂಗ್' ಅಂತಲೇ ಪ್ರಸಿದ್ಧರಾದ ಸ್ಟಾರ್ ಆಟಗಾರ ಪ್ರದೀಪ್ ನರ್ವಾಲ್ ಅವರನ್ನು ಉಳಿಸಿಕೊಂಡಿದ್ದಾರೆ.

ತೆಲಗು ಟೈಟಾನ್ಸ್ : ಅತಿ ಹೆಚ್ಚು ರೈಡಿಂಗ್ ಪಾಯಿಂಟ್ ತಂದ ದಾಖಲೆ ನಿರ್ಮಿಸಿರುವ ನಾಯಕ ರಾಹುಲ್ ಚೌಧರಿಯನ್ನು ಉಳಿಸಿಕೊಳ್ಳಲಾಗಿದೆ. ಮೂರು ವರ್ಷದಿಂದಲೂ ರಾಹುಲ್ ತೆಲಗು ಟೈಟಾನ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಜೈಪುರ ಪಿಂಕ್ ಪ್ಯಾಂಥರ್ಸ್: ಯುವ ಆಟಗಾರ ರಾಜೇಶ್ ನರ್ವಾಲ್, ಅಮಿತ್ ಹೂಡಾ, ಅನುಭವಿ ಆಟಗಾರ ಜಸ್ವೀರ್ ಸಿಂಗ್, ಶಬ್ಬೀರ್ ಬಾಪು ಅವರಂತಹ ಆಟಗಾರಿದ್ದರೂ ಜೈಪುರ ತಂಡ ಯಾವುದೇ ಆಟಗಾರರನ್ನು ಉಳಿಸಿಕೊಂಡಿಲ್ಲ.

ಪುಣೇರಿ ಪಲ್ಟನ್ಸ್ : ಪುಣೇರಿ ಪಲ್ಟನ್ ತಂಡ ಈ ಬಾರಿ ವಿಶ್ವಕಪ್ ವಿಜೇತ ತಂಡದ ಹೀರೋಗಳಾದ ಮನ್ಜೀತ್ ಚಿಲ್ಲರ್ ಇಲ್ಲವೇ ಅಜಯ್ ಠಾಕೂರ್ ಅವರನ್ನು ಉಳಿಸಿಕೊಂಡಿಲ್ಲ. ಬದಲಾಗಿ ದೀಪಕ್ ನಿವಾಸ್ ಹೂಡಾ ಅವರನ್ನು ತಂಡದಲ್ಲಿ ರೀಟೈನ್ ಮಾಡಿದೆ.

ಯು ಮುಂಬಾ: ಬೋನಸ್ ಕಾ ಬಾದ್'ಷಾ ಎಂದೇ ಕರೆಸಿಕೊಳ್ಳುವ ಅನೂಪ್ ಕುಮಾರ್ ಅವರನ್ನು ಯು ಮುಂಬಾ ತನ್ನ ತಂಡದಲ್ಲಿ ಉಳಿಸಿಕೊಂಡಿದೆ

ಬೆಂಗಳೂರು ಬುಲ್ಸ್ : ಈ ಬಾರಿ ಬೆಂಗಳೂರು ಬುಲ್ಸ್ ರಿಟೈನ್ ಮಾಡಿದ ಆಟಗಾರ ಹೆಸರು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಈ ಬಾರಿ ಮೋಹಿತ್ ಚಿಲ್ಲರ್ ಅವರನ್ನು ಕೈಬಿಟ್ಟು ಯುವ ಆಟಗಾರ ಆಶೀಶ್ ಸಾಂಗ್ವಾನ್ ಅವರನ್ನು ರೀಟೈನ್ ಮಾಡಿದೆ.

ದಬಾಂಗ್ ಡೆಲ್ಲಿ: ಕೇವಲ ಎರಡು ತಂಡಗಳು ಮಾತ್ರ ವಿದೇಶಿ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಅದರಲ್ಲಿ ಡೆಲ್ಲಿ ತಂಡವೂ ಒಂದು. ಕಳೆದ ಆವೃತ್ತಿಯಲ್ಲಿ ಆಲ್ರೌಂಡ್ ಆಟ ಪ್ರದರ್ಶಿಸಿದ ಮಿರಾಜ್ ಶೇಖ್ ಅವರನ್ನು ಉಳಿಸಿಕೊಂಡಿದೆ. ಕಾಶಿಲಿಂಗ್ ಅಡಿಕೆ ಅವರನ್ನು ಕೈಬಿಟ್ಟಿದ್ದು ಆಶ್ಚರ್ಯ ಮೂಡಿಸಿದ್ದಂತೂ ಸುಳ್ಳಲ್ಲ.

ಬೆಂಗಾಲ್ ವಾರಿಯರ್ಸ್: ಕೋರಿಯಾದ ಸ್ಟಾರ್ ಆಟಗಾರ ಜಾಂಗ್ ಕುನ್ ಲೀ ಕಳೆದ ಆವೃತ್ತಿಯಲ್ಲಿ ರೈಡಿಂಗ್'ನಲ್ಲಿ ಸಾಕಷ್ಟು ಗಮನ ಸೆಳೆದಿದ್ದರು. ಹಾಗಾಗಿ ಬೆಂಗಾಲ್ ವಾರಿಯರ್ಸ್ ತಂಡ ತನ್ನಲ್ಲೇ ಉಳಿಸಿಕೊಂಡಿದೆ.