Pro Kabaddi League: ಇಂದಿನಿಂದ ಬೆಂಗಳೂರಲ್ಲಿ ಪ್ರೊ ಕಬಡ್ಡಿ ಕಲರವ..!
ಇಂದಿನಿಂದ ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಟೂರ್ನಿ ಆರಂಭ
ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿವೆ ಆರಂಭಿಕ ಪಂದ್ಯಗಳು
ಉದ್ಘಾಟನಾ ಪಂದ್ಯದಲ್ಲಿ ದಬಾಂಗ್ ಡೆಲ್ಲಿ-ಯು ಮುಂಬಾ ಕಾದಾಟ
ಸ್ಪಂದನ್ ಕಣಿಯಾರ್, ಕನ್ನಡಪ್ರಭ
ಬೆಂಗಳೂರು(ಅ.07): ಟಿ20 ಕ್ರಿಕೆಟ್ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿರುವಾಗಲೇ ಕ್ರೀಡಾಭಿಮಾನಿಗಳಿಗೆ ಕಬಡ್ಡಿ ರಸದೌತಣವೂ ಸಿಗಲಿದೆ. 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಶುಕ್ರವಾರ ಚಾಲನೆ ದೊರೆಯಲಿದ್ದು, ಭಾರತ ಸೇರಿ ಹಲವು ದೇಶಗಳ ಯುವ, ಪ್ರತಿಭಾನ್ವಿತ ಹಾಗೂ ಅನುಭವಿ ಕಬಡ್ಡಿ ಪಟುಗಳು ಅಂಕಣಕ್ಕಿಳಿಯಲಿದ್ದಾರೆ. ಈ ಹಿಂದಿನಂತೆಯೇ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಭರ್ಜರಿ ಮೂರು ತಿಂಗಳುಗಳ ಕಾಲ ಪಂದ್ಯಾವಳಿ ನಡೆಯಲಿದೆ.
ಲೀಗ್ ಹಂತದ 132 ಪಂದ್ಯಗಳಿಗೆ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ ಆತಿಥ್ಯ ವಹಿಸಲಿವೆ. ಮೊದಲ 41 ಪಂದ್ಯಗಳು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ. ಆ ಬಳಿಕ ಪುಣೆ ನಂತರ ಹೈದರಾಬಾದ್‌ಗೆ ಲೀಗ್ ಸ್ಥಳಾಂತರಗೊಳ್ಳಲಿದೆ. ಲೀಗ್ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ 6 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ-ಆಫ್‌ಗೇರಲಿವೆ. ಪ್ಲೇ-ಆಫ್‌ನಲ್ಲಿ 2 ಎಲಿಮಿನೇಟರ್, 2 ಸೆಮಿಫೈನಲ್, 1 ಫೈನಲ್ ನಡೆಯಲಿದೆ.
Pro Kabaddi League ಕಬಡ್ಡಿ ಕಾದಾಟಕ್ಕೆ ಅಣಿಯಾದ ಕಂಠೀರವ ಸ್ಟೇಡಿಯಂ..!
ಮೂರೇ ನಗರ ಏಕೆ?: ‘ಕೋವಿಡ್ ಭೀತಿ ಕಡಿಮೆಯಾಗಿದ್ದರೂ ಸೋಂಕು ಹರಡುವಿಕೆಯ ಸಾಧ್ಯತೆಯನ್ನು ಕಡೆಗಣಿಸಲು ಆಗಲ್ಲ. ಹೀಗಾಗಿ ಹೆಚ್ಚು ಪ್ರಯಾಣವನ್ನು ತಡೆಯುವ ಉದ್ದೇಶದಿಂದ ಕೇವಲ 3 ನಗರಗಳಲ್ಲಿ ಲೀಗ್ ಹಂತ ನಡೆಸಲಾಗುತ್ತಿದೆ’ ಎಂದು ಲೀಗ್ ಆಯುಕ್ತ ಅನುಪಮ್ ಗೋಸ್ವಾಮಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ಆವೃತ್ತಿಯನ್ನು ಬೆಂಗಳೂರಿನ ಪಂಚತಾರಾ ಹೋಟೆಲ್ ಆವರಣದಲ್ಲಿ ಬಯೋಬಬಲ್‌ನೊಳಗೆ ನಡೆಸಲಾಗಿತ್ತು. ಇದೀಗ 2 ವರ್ಷ ಬಳಿಕ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲಾಗಿದ್ದು, ಟೂರ್ನಿಯು ತನ್ನ ಹಿಂದಿನ ವೈಭವವನ್ನು ಮೆರೆಯಲಿದೆ ಎನ್ನುವುದು ಆಯೋಜಕರ ವಿಶ್ವಾಸ.
ಮೊದಲ ದಿನದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆಸಿ ಮತ್ತು ಯು ಮುಂಬಾ ತಂಡಗಳು ಸೆಣಸಲಿವೆ. ದಿನದ 2ನೇ ಪಂದ್ಯದಲ್ಲಿ ದಕ್ಷಿಣದ ಡರ್ಬಿ ಎನಿಸಿರುವ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವೆ ಸೆಣಸಾಟ ನಡೆಯಲಿದೆ. ದಿನದ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಯು.ಪಿ. ಯೋಧಾಸ್ ವಿರುದ್ಧ ಹೋರಾಡಲಿದೆ.
ಈ ಹಿಂದಿನ ಚಾಂಪಿಯನ್ನರು
ಆವೃತ್ತಿ ವರ್ಷ ಚಾಂಪಿಯನ್
01ನೇ ಅವೃತ್ತಿ- 2014 ಜೈಪುರ ಪಿಂಕ್ ಪ್ಯಾಂಥರ್ಸ್
02ನೇ ಅವೃತ್ತಿ- 2015 ಯು ಮುಂಬಾ
03ನೇ ಅವೃತ್ತಿ- 2016 ಪಾಟ್ನಾ ಪೈರೇಟ್ಸ್
04ನೇ ಅವೃತ್ತಿ- 2016 ಪಾಟ್ನಾ ಪೈರೇಟ್ಸ್
05ನೇ ಅವೃತ್ತಿ- 2017 ಪಾಟ್ನಾ ಪೈರೇಟ್ಸ್
06ನೇ ಅವೃತ್ತಿ- 2018-19 ಬೆಂಗಳೂರು ಬುಲ್ಸ್
07ನೇ ಅವೃತ್ತಿ- 2019 ಬೆಂಗಾಲ್
08ನೇ ಅವೃತ್ತಿ- 2021-22 ಡೆಲ್ಲಿ