ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡವು ಪುಣೇರಿ ಪಲ್ಟನ್ ವಿರುದ್ಧ ಟೈಬ್ರೇಕರ್‌ನಲ್ಲಿ ಸೋಲನುಭವಿಸಿದೆ. ಆಕಾಶ್ ಶಿಂಧೆ 12 ಅಂಕ ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ತಮಿಳ್ ತಲೈವಾಸ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ ಗೆಲುವು ಸಾಧಿಸಿತು.
ವಿಶಾಖಪಟ್ಟಣಂ: ಪ್ರೊ ಕಬಡ್ಡಿ 12ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ವೀರೋಚಿತ ಸೋಲಿನ ಆರಂಭ ಪಡೆದಿದೆ. ಶುಕ್ರವಾರ ನಡೆದ ಪುಣೇರಿ ಪಲ್ಟನ್ ವಿರುದ್ಧದ ಪಂದ್ಯದಲ್ಲಿ ಟೈ ಬ್ರೇಕರ್‌ನಲ್ಲಿ ಬುಲ್ಸ್‌ಗೆ ಸೋಲು ಎದುರಾಯಿತು. 40 ನಿಮಿಷಗಳ ಆಟ ಮುಕ್ತಾಯಗೊಂಡ ಬಳಿಕ ಉಭಯ ತಂಡಗಳು 32-32ರಲ್ಲಿ ಸಮಬಲ ಸಾಧಿಸಿದವು.
ಹೊಸ ನಿಯಮದಂತೆ, ಫಲಿತಾಂಶ ನಿರ್ಧರಿಸಲು ಟೈ ಬ್ರೇಕರ್ ಮೊರೆ ಹೋಗಲಾಯಿತು. ಟೈ ಬ್ರೇಕರ್‌ನಲ್ಲಿ ಉಭಯ ತಂಡಗಳು ತಲಾ 5 ರೈಡ್ ನಡೆಸಿದವು. ನಿರ್ಣಾಯಕ ರೈಡ್‌ನಲ್ಲಿ ಬುಲ್ಸ್‌ನ ತಾರಾ ರೈಡರ್ ಆಕಾಶ್ ಶಿಂಧೆ ಔಟಾಗುವ ಮೂಲಕ ತಂಡಕ್ಕೆ ಹಿನ್ನಡೆಯಾಯಿತು. ಕೊನೆಯ ರೈಡ್‌ನಲ್ಲೂ ಬುಲ್ಸ್ ಅಂಕ ಗಳಿಸಲಿಲ್ಲ. ಹೀಗಾಗಿ, 6-4ರ ಅಂತರದಲ್ಲಿ ಪುಣೇರಿ ಗೆದ್ದು ಸಂಭ್ರಮಿಸಿತು.
ಬೆಂಗಳೂರು ಬುಲ್ಸ್ ಪರ ಆಕಾಶ್ ಸಿಂಧೆ 10 ರೈಡ್ ಮಾಡಿ ಎರಡು ಬೋನಸ್ ಹಾಗೂ 10 ಟಚ್ ಪಾಯಿಂಟ್ ಸಹಿತ 12 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಇನ್ನು ಅಶೀಶ್ ಮಲಿಕ್ 8 ಅಂಕಗಳನ್ನು ಗಳಿಸಿ ಮಿಂಚಿದರು. ಇನ್ನೊಂದೆಡೆ ಪುಣೇರಿ ಪಲ್ಟಾನ್ ಪರ ಆಧಿತ್ಯ ಸಿಂಧೆ 9 ಅಂಕ ಹಾಗೂ ಪಂಕಜ್ ಮೋಹಿತೆ 6 ಅಂಕ ಕಬಳಿಸಿ ಮಿಂಚಿದರು.
ದಿನದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ತಮಿಳ್ ತಲೈವಾಸ್ 38-35 ಅಂಕಗಳಲ್ಲಿ ಗೆಲುವು ಸಾಧಿಸಿತು. ಪಂದ್ಯದ ಕೊನೆಯ ರೈಡ್‌ನಲ್ಲಿ ಸೂಪರ್ ರೈಡ್ ದಾಖಲಿಸಿದ ಪವನ್ ಶೆರಾವತ್ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು.
ಬ್ಯಾಡ್ಮಿಂಟನ್ ವಿಶ್ವ ಕೂಟ: ಕ್ವಾರ್ಟರಲ್ಲಿ ಸೋತ ಸಿಂಧು
ಪ್ಯಾರಿಸ್: 6ನೇ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪದಕ ಗೆಲ್ಲುವ ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಕನಸು ಭಗ್ನಗೊಂಡಿದೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು, ಇಂಡೋನೇಷ್ಯಾದ ಪುತ್ರಿ ಕುಸುಮ ವರ್ದನಿ ವಿರುದ್ಧ 14-21, 21-13, 16-21 ಗೇಮ್‌ಗಳಲ್ಲಿ ಪರಾಭವಗೊಂಡರು. ಇನ್ನು, ಮಿಶ್ರ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಧೃವ್ ಕಪಿಲಾ ಹಾಗೂ ತನಿಶಾ ಕ್ರಾಸ್ಟೋ ಜೋಡಿ ಸಹ ಸೋತು ಹೊರಬಿತ್ತು. ವಿಶ್ವ ನಂ.4 ಜೋಡಿ, ಮಲೇಷ್ಯಾದ ಚೆನ್ ಟಾಂಗ್ ಹಾಗೂ ತೊ ಇ ವೀ ವಿರುದ್ಧ 15-21, 13-21ರಲ್ಲಿ ಸೋಲುಂಡಿತು.
ದೇಶವನ್ನು ಕ್ರೀಡಾ ಶ್ರೇಷ್ಠತೆ ಕೇಂದ್ರವನ್ನಾಗಿ ಮಾಡಲು ಸರ್ಕಾರ ಬದ್ಧ: ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ದೇಶದ ಜನತೆಗೆ ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯ ಕೋರಿದ್ದು, ಈ ವೇಳೆ ‘ ಭಾರತ ಕಳೆದ ದಶಕದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಭಾರತವನ್ನು ಕ್ರೀಡಾ ಶ್ರೇಷ್ಠತೆಯ ಜಾಗತಿಕ ಕೇಂದ್ರವನ್ನಾಗಿ ಮಾಡಲು ನಮ್ಮ ಸರ್ಕಾರ ಬದ್ಧ’ ಎಂದಿದ್ದಾರೆ. ‘ಎಕ್ಸ್’ನಲ್ಲಿ ಶುಭಕೋರಿರುವ ಅವರು, ‘ಭಾರತ ಕಳೆದ ದಶಕದಲ್ಲಿ ಕ್ರೀಡೆಯಲ್ಲಿ ಬಹಳಷ್ಟು ಸುಧಾರಣೆ ಕಂಡಿದೆ. ಯುವ ಕ್ರೀಡಾಪಟುಗಳನ್ನು ಬೆಳೆಸಲು ಕೆಳಮಟ್ಟದಿಂದ ಹಿಡಿದು ವಿಶ್ವದರ್ಜೆಯ ಸೌಲಭ್ಯಗಳನ್ನು ನೀಡುವವರೆಗೂ ಬದಲಾಗಿದೆ. ನಮ್ಮ ಸರ್ಕಾರ ಕ್ರೀಡಾಪಟುಗಳನ್ನು ಬೆಂಬಲಿಸಲು, ಮೂಲಸೌಕರ್ಯಗಳನ್ನು ನಿರ್ಮಿಸಲು ಮತ್ತು ಭಾರತವನ್ನು ಕ್ರೀಡಾ ಶ್ರೇಷ್ಠತೆಯ ಜಾಗತಿಕ ಕೇಂದ್ರವನ್ನಾಗಿ ಮಾಡಲು ಬದ್ಧವಾಗಿದೆ’ ಎಂದು ಬರೆದಿದ್ದಾರೆ.
