PKL7: ಯುಪಿ ಯೋಧ-ತಮಿಳ್ ತಲೈವಾಸ್ ಪಂದ್ಯ ರೋಚಕ ಟೈ!
ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಪಂದ್ಯ ಟೈ ಆಗಿದೆ. ಯುಪಿ ಯೋಧ-ತಮಿಳ್ ತಲೈವಾಸ್ ನಡುವಿನ ರೋಚಕ ಪಂದ್ಯ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಮುನ್ನಡೆಯಲ್ಲಿದ್ದ ಯೋಧ ತಂಡಕ್ಕೆ ಶಾಕ್ ನೀಡಿದ ತಲೈವಾಸ್ ಸಮಬಲ ಮಾಡಿಕೊಂಡು ನಿಟ್ಟುಸಿರು ಬಿಟ್ಟಿತು.
ಪಾಟಲೀಪುತ್ರ(ಆ.07): ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಯುಪಿ ಯೋಧ ಹಾಗೂ ತಮಿಳ್ ತಲೈವಾಸ್ ನಡುವಿನ ಪಂದ್ಯ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿತು. ಅಂತಿಮ 9 ನಿಮಿಷಗಳ ಹೋರಾಟ ಟಿ20 ಕ್ರಿಕೆಟ್ ಪಂದ್ಯವನ್ನು ಮೀರಿಸಿ ಬಿಟ್ಟಿತು. ಕಾರಣ ಯುಪಿ ಯೋಧಾ ಹಾಗೂ ತಮಿಳ್ ತಲೈವಾಸ್ ನಡುವಿನ ಪಂದ್ಯ 28-28 ಅಂಕಗಳಿಂದ ಟೈ ಆಗಿದೆ. ಈ ಮೂಲಕ ಈ ಆವೃತ್ತಿಯಲ್ಲಿ ಟೈ ಆದ ಮೊದಲ ಪಂದ್ಯ ಅನ್ನೋ ಖ್ಯಾತಿ ಪಡೆದಿದೆ.
ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !
ಪಂದ್ಯದ ಆರಂಭದಲ್ಲೇ ಮಂಜೀತ್ ಚಿಲ್ಲರ್ ಅದ್ಭುತ ಟ್ಯಾಕಲ್‌ನಿಂದ ತಮಿಳ್ ತಲೈವಾಸ್ ಅಂಕ ಖಾತೆ ತೆರೆಯಿತು. ಮೊದಲ ರೈಡ್‌ನಲ್ಲಿ ಹಿನ್ನಡೆ ಅನುಭವಿಸಿದ ಯುಪಿ ಯೋಧ, ಇತ್ತ ಡಿಫೆಂಡ್‌ನಲ್ಲೂ ಅಂಕ ಕಳೆದುಕೊಂಡಿತು. ರಿಷಾಂಕ್ ದೇವಾಡಿ ರೈಡ್ ಮೂಲಕ ಯುಪಿ ಯೋಧ ಮೊದಲ ಅಂಕ ಬಾಚಿಕೊಂಡಿತು. ಈ ಮೂಲಕ ತಮಿಳ್ ತಲೈವಾಸ್‌ಗೆ ತಿರುಗೇಟು ನೀಡಿತು. ಇಷ್ಟೇ ಅಲ್ಲ 2-2 ಅಂಗಳ ಮೂಲಕ ಸ್ಕೂರ್ ಸಮಬಲ ಮಾಡಿಕೊಂಡಿತು. ಉಭಯ ತಂಡ ಕಠಿಣ ಹೋರಾಟ ನೀಡಿತು. ಹೀಗಾಗಿ ಯುಪಿ ಹಾಗೂ ತಮಿಳು ಒಟ್ಟು 5 ರೈಡ್‌ನಲ್ಲಿ ಯಾವುದೇ ಅಂಕ ಬರಲಿಲ್ಲ.
ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!
ಪಂದ್ಯದ 6ನೇ ನಿಮಿಷದಲ್ಲಿ ಯುಪಿ ಯೋಧ ಮುನ್ನಡೆ ಪಡೆದುಕೊಂಡಿತು. ಯೋಧ ರೈಡ್ ಹಾಗೂ ಟ್ಯಾಕಲ್ ಮೂಲಕ ಅಂಕ ಗಳಿಸಿದರೆ, ತಮಿಳ್ ತಲೈವಾಸ್ ಅಂಕಕ್ಕಾಗಿ ಹರಸಾಹಸ ಪಟ್ಟಿತು. ಮೊದಲಾರ್ಧದ ಅಂತ್ಯದಲ್ಲಿ ಯುಪಿ ಯೋಧ 16-12 ಅಂಗಳಿಂದ ಮುನ್ನಡೆ ಕಾಯ್ದುಕೊಂಡಿತು. ಸೆಕೆಂಡ್ ಹಾಫ್‌ನಲ್ಲಿ ತಮಿಳ್ ತಲೈವಾಸ್ ಕೂಡ ಆಕ್ರಮಣಕಾರಿ ಆಟವಾಡಿತು. ಹಿನ್ನಡೆ ಅನುಭಿವಿಸಿದ್ದ ತಮಿಳ್ ತಲೈವಾಸ್ ನಿಧಾನವಾಗಿ ಚೇತರಿಸಿಕೊಂಡಿತು.
ದ್ವಿತಿಯಾರ್ಧದ 11ನೇ ನಿಮಿಷದಲ್ಲಿ ತಮಿಳ್ ತಲೈವಾಸ್ 23-23 ಅಂಕಗಳಿಂದ ಸ್ಕೋರ್ ಸಮಬಲ ಮಾಡಿಕೊಂಡಿತು. ಇನ್ನುಳಿದ 9 ನಿಮಿಷಗಳ ಆಟ ಟಿ20 ಕ್ರಿಕೆಟ್ ಪಂದ್ಯವನ್ನು ಮೀರಿಸಿತ್ತು. ಹೆಜ್ಜೆ ಹೆಜ್ಜೆಗೂ ಸ್ಕೋರ್ ಸಮಬಲಗೊಳ್ಳುತ್ತಿತ್ತು. ಹೀಗಾಗಿ ಗೆಲುವು ಯಾರಿಗೆ ಅನ್ನೋದೇ ಕುತೂಹಲ ಮೂಡಿಸಿತ್ತು. 19ನೇ ನಿಮಿಷದಲ್ಲಿ ಯುಪಿ ಯೋಧ 28-27 ಅಂಕಗಳಿಂದ ಮುನ್ನಡೆ ಪಡೆಯಿತು. ಆದರೆ ಅಂತಿಮ ರೈಡ್‌ನಲ್ಲಿ ತಲೈವಾಸ್ ಅಂಕಗಳಿಸೋ ಮೂಲಕ 28-28 ಅಂಕಗಳಿಂದ ಪಂದ್ಯ ಟೈಗೊಂಡಿತು.