ಪ್ರೊ ಕಬಡ್ಡಿ: ಯೋಧಾ ಪಡೆಗೆ ಶಾಕ್ ನೀಡಿದ ಟೈಟಾನ್ಸ್
’ಎ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ತವರಿನ ತಂಡ ಹರಿಯಾಣ ಸ್ಟೀಲರ್ಸ್ ತಂಡವನ್ನು 26-53 ಅಂಕಗಳಿಂದ ಮಣಿಸಿದ ಯು ಮುಂಬಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಸೋನೆಪತ್[ಅ.13]: ಪ್ರಶಾಂತ್ ಕುಮಾರ್ ರೈ ಆಲ್ರೌಂಡ್ ಪ್ರದರ್ಶನದ ಹೊರತಾಗಿಯೂ ರಾಹುಲ್ ಚೌಧರಿಯ ಮಿಂಚಿನ ಪ್ರದರ್ಶನದ ನೆರವಿನಿಂದ ತೆಲುಗು ಟೖಟಾನ್ಸ್ ತಂಡವು ಯುಪಿ ಯೋಧಾ ತಂಡವನ್ನು 34-29 ಅಂಕಗಳ ಅಂತರದಿಂದ ರೋಚಕವಾಗಿ ಮಣಿಸಿದೆ. ಈ ಮೂಲಕ ’ಬಿ’ ಗುಂಪಿನ ಅಂಕಪಟ್ಟಿಯಲ್ಲಿ ಸತತ ಎರಡು ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದೆ.
ರಾಹುಲ್ ಚೌಧರಿ ಮೊದಲ ರೈಡ್’ನಲ್ಲೇ ಟೈಟಾನ್ಸ್’ಗೆ ಅಂಕದ ಖಾತೆ ತೆರೆದರು. ಬಳಿಕ ನೀಲೇಶ್ ಸಾಲುಂಕೆ ಎರಡನೇ ಅಂಕ ತಂದಿತ್ತರು. ಆದರೆ ಮೂರನೇ ರೈಡ್’ನಲ್ಲಿ ರಾಹುಲ್ ಚೌಧರಿಯನ್ನು ಟ್ಯಾಕಲ್ ಮಾಡುವ ಮೂಲಕ ಯೋಧಾ ಮೊದಲ ಅಂಕ ಸಂಪಾದಿಸಿತು. ಪಂದ್ಯದ 10ನೇ ನಿಮಿಷದಲ್ಲಿ ಟೈಟಾನ್ಸ್ 9-8 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಆಬಳಿಕ ಆಕ್ರಮಣಕಾರಿಯಾಟಕ್ಕೆ ಮುಂದಾದ ಟೈಟಾನ್ಸ್ ಮೊದಲಾರ್ಧ ಮುಕ್ತಾಯದ ವೇಳೆಗೆ 18-13 ಅಂಕಗಳ ಮುನ್ನಡೆ ಸಾಧಿಸಿತು.
ಮೊದಲಾರ್ಧದ ಹಿನ್ನಡೆಯಿಂದ ಹೊರಬರಲು ಯೋಧಾ ಪಡೆ ಸಾಕಷ್ಟು ಬೆವರು ಹರಿಸಿತು. ಕನ್ನಡಿಗ ಪ್ರಶಾಂತ್ ಕುಮಾರ್ ರೈ ರೈಡಿಂಗ್ ಹಾಗೂ ಡಿಫೆಂಡಿಂಗ್’ನಲ್ಲಿ ಅತ್ಯದ್ಭುತ ಚಾಕಚ್ಯತೆ ಮೆರೆದರು. ಪಂದ್ಯ ಮುಕ್ತಾಯಕ್ಕೆ ಕೊನೆಯ ಎರಡು ನಿಮಿಷಗಳಿದ್ದಾಗ ಯೋಧಾ ಪಡೆ 31-29 ಕೇವಲ 2 ಅಂಕಗಳ ಹಿನ್ನಡೆ ಸಾಧಿಸಿತ್ತು. ಕೊನೆಯಲ್ಲಿ ರಾಹುಲ್ ಚೌಧರಿ ಮತ್ತೊಂದು ಯಶಸ್ವಿ ರೈಡ್ ನಡೆಸುವ ಮೂಲಕ ಟೈಟಾನ್ಸ್ ತಂಡದ ಗೆಲುವನ್ನು ಖಚಿತ ಪಡಿಸಿದರು.
ಅನಾಯಾಸವಾಗಿ ಸ್ಟೀಲರ್ಸ್ ಮಣಿಸಿ ಯು ಮುಂಬಾ
’ಎ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ತವರಿನ ತಂಡ ಹರಿಯಾಣ ಸ್ಟೀಲರ್ಸ್ ತಂಡವನ್ನು 26-53 ಅಂಕಗಳಿಂದ ಮಣಿಸಿದ ಯು ಮುಂಬಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಸಿದ್ಧಾರ್ಥ್ ದೇಸಾಯಿ ಯು ಮುಂಬಾ ಪಡೆಗೆ ಮೊದಲ ಅಂಕ ತಂದಿತ್ತರು. ಇದರ ಬೆನ್ನಲ್ಲೇ ಮೊನು ಗೋಯೆತ್ ಸ್ಟೀಲರ್ಸ್ ಪಡೆಗೆ ರೈಡಿಂಗ್’ನಲ್ಲಿ ಅಂಕ ಕಲೆಹಾಕುವ ಮೂಲಕ ಸಮಬಲ ಸಾಧಿಸುವಂತೆ ಮಾಡಿದರು. ಮತ್ತೆ ದಾಳಿಗಿಳಿದ ಸಿದ್ದಾರ್ಥ್ ಮತ್ತೆರಡು ಅಂಕ ಸಂಪಾದಿಸುವ ಮೂಲಕ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಪಂದ್ಯದ ನಾಲ್ಕನೇ ನಿಮಿಷದಲ್ಲಿ ಅಭಿಷೇಕ್ ಸಿಂಗ್ ಸೂಪರ್ ರೈಡ್ ಮಾಡುವ ಮೂಲಕ ಸ್ಟೀಲರ್ಸ್ ತಂಡವನ್ನು ಆಲೌಟ್ ಮಾಡಿದರು. ಈ ಮೂಲಕ ಯು ಮುಂಬಾ 10-ಂ2 ಅಂಕಗಳ ಮುನ್ನಡೆ ಸಾಧಿಸಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಯು ಮುಂಬಾ 27-15 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು.
ಇನ್ನು ದ್ವಿತಿಯಾರ್ಧದಲ್ಲೂ ಆಕ್ರಮಣಕಾರಿಯಾಟ ಪ್ರದರ್ಶಿಸಿದ ಮುಂಬಾ ತವರಿನ ತಂಡ ಸ್ಟೀಲರ್ಸ್’ಗೆ ಆಘಾತ ನೀಡಿತು. ಅಭಿಷೇಕ್ ಸಿಂಗ್ ಹಾಗೂ ಫಜಲ್ ಅಟ್ರಾಚಲಿ ಜೋಡಿ ಸ್ಟೀಲರ್ಸ್ ತಂಡವನ್ನು ಅನಾಯಾಸವಾಗಿ ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಮುಂಬಾ ಪರ ಅಭಿಷೇಕ್ ಸಿಂಗ್ 14 ಅಂಕ ಗಳಿಸಿದರೆ, ಅಟ್ರಾಚಲಿ 7 ಹಾಗೂ ಸಿದ್ಧಾರ್ಥ್ ದೇಸಾಯಿ 8 ಅಂಕ ಗಳಿಸಿದರು.