ಅಹಮ್ಮದಾಬಾದ್(ನ.21): ಅನುಭವಿಗಳಾದ ಅಜಯ್‌ ಠಾಕೂರ್‌ ಹಾಗೂ ಸುಖೇಶ್‌ ಹೆಗ್ಡೆ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ತಮಿಳ್‌ ತಲೈವಾಸ್‌, ಪ್ರೊ ಕಬಡ್ಡಿ 6ನೇ ಲೀಗ್‌ನ 72ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ 27-23 ಅಂಕಗಳ ರೋಚಕ ಜಯ ಸಾಧಿಸಿತು.

ಕನ್ನಡಿಗ ಸುಖೇಶ್‌ ಹೆಗ್ಡೆ ಚೊಚ್ಚಲ ರೈಡ್‌ನಲ್ಲೇ 2 ಅಂಕ ಗಳಿಸುವ ಮೂಲಕ ತಮಿಳ್‌ ತಲೈವಾಸ್‌ಗೆ ಉತ್ತಮ ಆರಂಭ ನೀಡಿದರು. ನೀಲೇಶ್‌ ಸಾಳುಂಕೆ, ತೆಲುಗು ಟೈಟಾನ್ಸ್‌ ಖಾತೆ ತೆರೆದರು. ಉಭಯ ತಂಡಗಳ ಆಟಗಾರರು ಆಕ್ರಮಣಕಾರಿ ಆಟಕ್ಕಿಂತ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಅಂಕ ಗಳಿಕೆಗೆ ಎರಡು ತಂಡಗಳು ಸಾಕಷ್ಟುಪ್ರಯಾಸಪಟ್ಟವು. ಈ ವೇಳೆ ಅಜಯ್‌, ಸುಖೇಶ್‌, ಅತುಲ್‌ ನಿಧಾನವಾಗಿ ಒಂದೊಂದೇ ಅಂಕ ಕಲೆ ಹಾಕುತ್ತಾ ಸಾಗಿದರು. ಪಂದ್ಯದ 16ನೇ ನಿಮಿಷದಲ್ಲಿ ಸೂಪರ್‌ ರೈಡ್‌ನಲ್ಲಿ ಮೂವರನ್ನು ಬಲಿ ಪಡೆದ ಅಜೇಯ್‌ ಠಾಕೂರ್‌, ತಂಡದ ಮುನ್ನಡೆಯನ್ನು 13-6ಕ್ಕೇರಿಸಿದರು. ಅಲ್ಲದೇ 17ನೇ ನಿಮಿಷದಲ್ಲಿ ಟೈಟಾನ್ಸ್‌ ಅನ್ನು ಆಲೌಟ್‌ ಮಾಡಿದ ತಲೈವಾಸ್‌ 17-9 ಮುನ್ನಡೆ ಸಾಧಿಸಿತು, ಮೊದಲಾರ್ಧಕ್ಕೆ 18-10ರಿಂದ ಮುನ್ನಡೆ ಹೊಂದಿತ್ತು.

ದ್ವಿತೀಯಾರ್ಧದಲ್ಲಿ ಪಂದ್ಯ ಮತ್ತಷ್ಟುಬಿಗಿಯಾಗ ತೊಡಗಿತು. ಅದರಲ್ಲೂ ಟೈಟಾನ್ಸ್‌ ಆಟಗಾರರು ಅಜಯ್‌, ಸುಖೇಶ್‌ರನ್ನು ಕಟ್ಟಿಹಾಕುವ ಮೂಲಕ ತಿರುಗೇಟು ನೀಡುವ ಲಕ್ಷಣ ತೋರಿದರು. ದ್ವಿತೀಯಾರ್ಧದಲ್ಲಿ ಲಯಕ್ಕೆ ಮರಳಿದ ರಾಹುಲ್‌ ಚೌಧರಿ ತಂಡದ ಹೋರಾಟಕ್ಕೆ ಜೀವ ತುಂಬಿದರು. ಆದರೆ, ಅನುಭವಿ ಮಂಜೀತ್‌ ಚಿಲ್ಲಾರ್‌ರ ತಂತ್ರಗಾರಿಕೆ ಹಾಗೂ ಮಾರ್ಗದರ್ಶನ ತಲೈವಾಸ್‌ಗೆ ಫಲ ನೀಡಿತು. ಅಂತಿಮವಾಗಿ ಜಯ ಅಜಯ್‌ ಠಾಕೂರ್‌ ತಂಡಕ್ಕೆ ಒಲಿಯಿತು.

ಟರ್ನಿಂಗ್‌ ಪಾಯಿಂಟ್‌: 17ನೇ ನಿಮಿಷದಲ್ಲಿ ಟೈಟಾನ್ಸ್‌ ಅನ್ನು ಆಲೌಟ್‌ ಮಾಡಿ ಮೊದಲಾರ್ಧದ ವೇಳೆ 18-10 ಮುನ್ನಡೆ ಕಾಯ್ದುಕೊಂಡಿದ್ದು ತಲೈವಾಸ್‌ ಆತ್ಮವಿಶ್ವಾಸವನ್ನು ದುಪ್ಪಟುಗೊಳಿಸಿತು. ತಲೈವಾಸ್‌ ಆಟಗಾರರು ಆಕ್ರಮಣಕಾರಿ ಆಟಕ್ಕಿಂತ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದು, ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.

ವಿನಯ್‌ ಕುಮಾರ್‌ ಡಿ.ಬಿ.