ಪ್ರೊ ಕಬಡ್ಡಿ: ಮತ್ತೊಂದು ಡ್ರಾಗೆ ಸಾಕ್ಷಿಯಾದ ಡೆಲ್ಲಿ-ಗುಜರಾತ್ ಪಂದ್ಯ
ಮೊದಲಾರ್ಧದ ಆರಂಭಿಕ ಹಿನ್ನಡೆಯನ್ನು ಮೆಟ್ಟಿನಿಲ್ಲಲು ಡೆಲ್ಲಿ ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. ರೈಡಿಂಗ್’ನಲ್ಲಿ ನವೀನ್ ಕುಮಾರ್ ಹಾಗೂ ಡಿಫೆಂಡಿಂಗ್’ನಲ್ಲಿ ರವೀಂದ್ರ ಪೆಹಾಲ್ ಉತ್ತಮ ಪ್ರದರ್ಶನ ತೋರುವ ಮೂಲಕ ಪಂದ್ಯದಲ್ಲಿ ಕಮ್’ಬ್ಯಾಕ್ ಮಾಡಿತು.
ಚೆನ್ನೈ[ಅ.09]: ಕಳೆದ ಆವೃತ್ತಿಯ ರನ್ನರ್ ಅಪ್ ಗುಜರಾತ್ ಸೂಪರ್’ಜೈಂಟ್ಸ್- ದಬಾಂಗ್ ಡೆಲ್ಲಿ ನಡುವಿನ ಪಂದ್ಯ 32-32 ಅಂಕಗಳಿಂದ ರೋಚಕ ಡ್ರಾದಲ್ಲಿ ಅಂತ್ಯವಾಗಿದೆ. ಆರನೇ ಆವೃತ್ತಿಯಲ್ಲಿದು ಎರಡನೇ ಡ್ರಾ ಪಂದ್ಯವಾಗಿದೆ. ಈ ಮೊದಲು ಯು ಮುಂಬಾ-ಪುಣೇರಿ ಪಲ್ಟಾನ್ ನಡುವಿನ ಪಂದ್ಯವೂ ಡ್ರಾನಲ್ಲಿ ಅಂತ್ಯವಾಗಿತ್ತು.
ಡೆಲ್ಲಿ ತಂಡಕ್ಕೆ ಸಚಿನ್ ಕುಮಾರ್ ಮೊದಲ ಅಂಕ ತಂದಿತ್ತರು. ಇದರ ಬೆನ್ನಲ್ಲೇ ಗುಜರಾತ್’ನ ಸ್ಟಾರ್ ರೈಡರ್ ಕೆ. ಪ್ರಪಂಜನ್ 2 ಅಂಕ ತಂದಿತ್ತರು. ಪಂದ್ಯದ ಆರನೇ ನಿಮಿಷದಲ್ಲಿ ಡೆಲ್ಲಿ ತಂಡವನ್ನು ಆಲೌಟ್ ಮಾಡಿದ ಗುಜರಾತ್ 9-2 ಅಂಕಗಳ ಮುನ್ನಡೆ ಸಾಧಿಸಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಗುಜರಾತ್ 17-12 ಅಂಕಗಳ ಮುನ್ನಡೆ ಸಾಧಿಸಿತು.
ಮೊದಲಾರ್ಧದ ಆರಂಭಿಕ ಹಿನ್ನಡೆಯನ್ನು ಮೆಟ್ಟಿನಿಲ್ಲಲು ಡೆಲ್ಲಿ ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. ರೈಡಿಂಗ್’ನಲ್ಲಿ ನವೀನ್ ಕುಮಾರ್ ಹಾಗೂ ಡಿಫೆಂಡಿಂಗ್’ನಲ್ಲಿ ರವೀಂದ್ರ ಪೆಹಾಲ್ ಉತ್ತಮ ಪ್ರದರ್ಶನ ತೋರುವ ಮೂಲಕ ಪಂದ್ಯದಲ್ಲಿ ಕಮ್’ಬ್ಯಾಕ್ ಮಾಡಿತು. ಪಂದ್ಯ ಮುಕ್ತಾಯಕ್ಕೆ ಕಡೆಯ 2 ನಿಮಿಷಗಳಿದ್ದಾಗ ಗುಜರಾತ್’ನ ರೋಹಿತ್ ಅವರನ್ನು ಟ್ಯಾಕಲ್ ಮಾಡಿದ ಡೆಲ್ಲಿ 31-31 ಅಂಕಗಳಿಂದ ಸಮಬಲ ಸಾಧಿಸಿತು. ಇದರ ಬೆನಲ್ಲೇ ಪವನ್ ಡೆಲ್ಲಿಗೆ ಮತ್ತೊಂದು ಅಂಕ ತಂದುಕೊಡುವ ಮೂಲಕ ಮೊದಲ ಬಾರಿಗೆ ಮುನ್ನಡೆ ಸಾಧಿಸಿತು. ಆದರೆ ಮಹೇಂದರ್ ರಜಪೂತ್ ಗುಜರಾತ್’ಗೆ ಒಂದು ಅಂಕ ತಂದು ಪಂದ್ಯ ಡ್ರಾ ಸಾಧಿಸುವಂತೆ ಮಾಡಿದರು.
ಬಿ ಗುಂಪಿನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡವು ತಮಿಳ್ ತಲೈವಾಸ್ ತಂಡವನ್ನು 33-28 ಅಂಕಗಳಿಂದ ಮಣಿಸಿದೆ. ಮೊದಲಾರ್ಧದಲ್ಲಿ ತಮಿಳ್ ತಲೈವಾಸ್ ತಂಡಕ್ಕಿಂತ ತೆಲುಗು ಟೈಟಾನ್ಸ್ ತಂಡ 6 ಅಂಕಗಳ ಮುನ್ನಡೆ ಸಾಧಿಸಿತ್ತು.
ಮೊದಲಾರ್ಧ ಮುಕ್ತಾಯದ ವೇಳೆಗೆ ಟೈಟಾನ್ಸ್ 17-11 ಅಂಕಗಳ ಮುನ್ನಡೆ ಸಾಧಿಸಿತ್ತು. ಆ ಬಳಿಕವೂ ದ್ವಿತಿಯಾರ್ಧದಲ್ಲೂ ಅದೇ ಮುನ್ನಡೆ ಕಾಯ್ದುಕೊಂಡ ಟೈಟಾನ್ಸ್ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ತಲೈವಾಸ್ ಪರ ಅಜಯ್ ಠಾಕೂರ್ ಹಾಗೂ ಟೈಟಾನ್ಸ್ ಪರ ರಾಹುಲ್ ಚೌಧರಿ ತಲಾ 9 ಅಂಕ ಕಲೆಹಾಕಿದರು.