ಪ್ರೊ ಕಬಡ್ಡಿ: ಯು ಮುಂಬಾ- ಬೆಂಗಾಲ್ ಟೂರ್ನಿಯಿಂದ ಔಟ್
ಟೂರ್ನಿಯ ಬಲಿಷ್ಠ ತಂಡಗಳು ಎನಿಸಿದ್ದ ಯು ಮುಂಬಾ ಮತ್ತು ಬೆಂಗಾಲ್ ವಾರಿಯರ್ಸ್ ಎಲಿಮಿನೇಟರ್‌ನಲ್ಲಿ ಸೋತು ಹೊರಬಿದ್ದಿವೆ. ಪೈಪೋಟಿಯ ಜಯ ಸಾಧಿಸಿದ ದಬಾಂಗ್ ಡೆಲ್ಲಿ ಹಾಗೂ ಯೋಧಾ ಎಲಿಮಿನೇಟರ್ 3ನೇ ಹಂತಕ್ಕೇರಿವೆ.
ಕೊಚ್ಚಿ[ಡಿ.31]: ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರೊ ಕಬಡ್ಡಿ 6ನೇ ಆವೃತ್ತಿಯ ಎಲಿಮಿನೇಟರ್ 1 ಮತ್ತು 2ನೇ ಪಂದ್ಯದಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬಿದ್ದಿದೆ. ಟೂರ್ನಿಯ ಬಲಿಷ್ಠ ತಂಡಗಳು ಎನಿಸಿದ್ದ ಯು ಮುಂಬಾ ಮತ್ತು ಬೆಂಗಾಲ್ ವಾರಿಯರ್ಸ್ ಎಲಿಮಿನೇಟರ್‌ನಲ್ಲಿ ಸೋತು ಹೊರಬಿದ್ದಿವೆ. ಪೈಪೋಟಿಯ ಜಯ ಸಾಧಿಸಿದ ದಬಾಂಗ್ ಡೆಲ್ಲಿ ಹಾಗೂ ಯೋಧಾ ಎಲಿಮಿನೇಟರ್ 3ನೇ ಹಂತಕ್ಕೇರಿವೆ.
ಸೋಮವಾರ ಡೆಲ್ಲಿ ಮತ್ತು ಯೋಧಾ ಸೆಣಸಲಿವೆ. ಮೊದಲ ಪಂದ್ಯದಲ್ಲಿ ಮುಂಬಾ ಜಯಿಸಲಿದೆ ಎನ್ನುವ ಲೆಕ್ಕಚಾರವನ್ನು ಯೋಧಾ ಉಲ್ಟಾ ಮಾಡಿತು. ಡಿಫೆನ್ಸ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಯೋಧಾ, ಮುಂಬಾವನ್ನು 5 ಅಂಕಗಳ ಅಂತರದಲ್ಲಿ ಬಗ್ಗು ಬಡಿಯಿತು. 6ನೇ ನಿಮಿಷದಲ್ಲಿ ಸಿದ್ಧಾರ್ಥ್‌ರನ್ನು ಔಟ್ ಮಾಡಿ 6-5 ಮುನ್ನಡೆ ಪಡೆದ ಯೋಧಾ ಹಿಂತಿರುಗಿ ನೋಡಲೇ ಇಲ್ಲ. ಮೊದಲಾರ್ಧಕ್ಕೆ 18-15 ಮುನ್ನಡೆ ಕಾಯ್ದು ಕೊಂಡ ಯೋಧಾ, ಕೊನೆಗೆ 34-29ರಲ್ಲಿ ಪಂದ್ಯ ಗೆದ್ದಿತು.
2ನೇ ಎಲಿಮಿನೇಟರ್ ಪಂದ್ಯದಲ್ಲಿ ರೈಡಿಂಗ್ ಮತ್ತು ಡಿಫೆನ್ಸ್‌ನಲ್ಲಿ ಪ್ರಾಬಲ್ಯ ಮೆರೆದ ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್ ವಿರುದ್ಧ 39-28 ರಿಂದ ಗೆಲುವು ಸಾಧಿಸಿತು. ಇದರೊಂದಿಗೆ ಈ ಆವೃತ್ತಿಯಲ್ಲಿ ಡೆಲ್ಲಿ, ಬೆಂಗಾಲ್ ವಿರುದ್ಧ ಆಡಿದ 3 ಪಂದ್ಯಗಳಲ್ಲಿ ಜಯಭೇರಿ ಬಾರಿಸಿತು.
ಮೊದಲಾರ್ಧದಲ್ಲಿ ಡೆಲ್ಲಿ ತಂಡ 13-17 ರಿಂದ ಹಿನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲಿ ಮಿಂಚಿನಾಟ ಆಡಿದ ಯುವ ರೈಡರ್ ನವೀನ್ ಕುಮಾರ್ ರೈಡಿಂಗ್‌ನಲ್ಲಿ 11 ಅಂಕಗಳಿಸಿ ಪಂದ್ಯದ ಜಯದಲ್ಲಿ ಮಹತ್ವದ ಪಾತ್ರವಹಿಸಿದರು.
ಟರ್ನಿಂಗ್ ಪಾಯಿಂಟ್: ಮೊದಲಾರ್ಧದಲ್ಲಿ 4 ಅಂಕಗಳ ಹಿನ್ನಡೆ ಹೊಂದಿದ್ದರೂ ದ್ವಿತೀಯಾರ್ಧದ ರೈಡಿಂಗ್‌ನಲ್ಲಿ ಡೆಲ್ಲಿ ಪ್ರಾಬಲ್ಯ ಸಾಧಿಸಿದ್ದು ಮಹತ್ವದ ತಿರುವು ನೀಡಿತು.
ವರದಿ: ಮಲ್ಲಪ್ಪ ಸಿ ಪಾರೇಗಾಂವ, ಕನ್ನಡಪ್ರಭ