ನವದೆಹಲಿ(ಡಿ.23): ಭಾರತ ಮಹಿಳಾ ಟಿ20 ಕ್ರಿಕೆಟ್‌ ತಂಡದಲ್ಲಿ ಹೊಸದಾಗಿ ಸ್ಥಾನ ಪಡೆದಿರುವ ದೆಹಲಿ ಆಟಗಾರ್ತಿ ಪ್ರಿಯಾ ಪೂನಿಯಾ ತಮ್ಮದೇ ಸ್ವಂತ ಕ್ರಿಕೆಟ್‌ ಮೈದಾನ ಹೊಂದಿದ್ದಾರೆ ಎಂದರೆ ನಂಬಲು ಕಷ್ಟವಾಗಬಹುದು. ಆದರೆ ಇದು ನಿಜ. ಶುಕ್ರವಾರ ನ್ಯೂಜಿಲೆಂಡ್‌ ಪ್ರವಾಸಕ್ಕೆ ತಂಡ ಆಯ್ಕೆ ಮಾಡಿದ ಬಿಸಿಸಿಐ, ಕರ್ನಾಟಕದ ವೇದಾ ಕೃಷ್ಣಮೂರ್ತಿ ಬದಲಿಗೆ ಪ್ರಿಯಾಗೆ ಭಾರತ ತಂಡದಲ್ಲಿ ಸ್ಥಾನ ನೀಡಿತು. ಈ ಸುದ್ದಿ ಪ್ರಿಯಾಗಿಂತ ಅವರ ತಂದೆ ಸುರೇಂದರ್‌ ಪೂನಿಯಾಗೆ ಹೆಚ್ಚು ಸಂತಸ, ಸಂಭ್ರಮ ತಂದಿತು.

ಸುರೇಂದರ್‌ ಸರ್ವೇ ಆಫ್‌ ಇಂಡಿಯಾದಲ್ಲಿ ಉದ್ಯೋಗದಲ್ಲಿದ್ದಾರೆ. ಕೇಂದ್ರ ಸರ್ಕಾರದ ನೌಕರರಾಗಿರುವ ಕಾರಣ, ಪದೇ ಪದೇ ವರ್ಗಾವಣೆಗೊಳ್ಳುತ್ತಲೇ ಇರುತ್ತಾರೆ. ಆದರೆ ಮಗಳ ಕ್ರಿಕೆಟ್‌ ಭವಿಷ್ಯಕ್ಕಾಗಿ ಅವರು ಜೈಪುರದಲ್ಲಿ ಜಮೀನು ಖರೀದಿಸಿ ಅದನ್ನು ಕ್ರಿಕೆಟ್‌ ಮೈದಾನವಾಗಿ ಪರಿವರ್ತಿಸಿ, ಪ್ರಿಯಾ ಅಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದು ಈಗ ಪ್ರತಿಫಲ ಕಾಣುತ್ತಿದೆ.

ಮೈದಾನ ನಿರ್ಮಿಸಲು ಕಾರಣವೇನು?: ಸುರೇಂದರ್‌ಗೆ ಕ್ರಿಕೆಟ್‌ ಎಂದರೆ ಹುಚ್ಚು ಪ್ರೀತಿ. ಆದರೆ ತಾವು ಕ್ರಿಕೆಟರ್‌ ಆಗಲು ಸಾಧ್ಯವಾಗದ ಕಾರಣ, ಮಗಳನ್ನು ಕ್ರಿಕೆಟರ್‌ ಮಾಡಲು ಪಣತೊಟ್ಟರು. ಪಶ್ಚಿಮ ದೆಹಲಿ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿಗೆ ಸೇರಿಸಿದರು. ತಮ್ಮ ಪ್ರತಿಭೆಗೆ ತಕ್ಕ ಪ್ರದರ್ಶನ ತೋರುತ್ತಾ ಸಾಗಿದ ಪ್ರಿಯಾಗೆ, 2015ರಲ್ಲಿ ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧ ಅನಧಿಕೃತ ಪಂದ್ಯದಲ್ಲಿ ಭಾರತ ‘ಎ’ ಪರ ಆಡುವ ಅವಕಾಶ ದೊರೆಯಿತು. 2014-15ರ ದೇಸಿ ಋುತುವಿನಲ್ಲಿ ಆಕರ್ಷಕ ಆಟವಾಡಿದ ಪ್ರಿಯಾ, ಪಶ್ಚಿಮ ವಲಯದ ವಿರುದ್ಧ ಕೋಲ್ಕತಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಉತ್ತರ ವಲಯದ ಪರ 266 ಎಸೆತಗಳಲ್ಲಿ 95 ರನ್‌ ಗಳಿಸಿ ಗಮನ ಸೆಳೆದಿದ್ದರು. ಪ್ರಿಯಾ ವೃತ್ತಿಪರ ಕ್ರಿಕೆಟ್‌ಗೆ ಒಗ್ಗಿಕೊಳ್ಳುತ್ತಿರುವಾಗ ಅವರ ತಂದೆಗೆ ಜೈಪುರಕ್ಕೆ ವರ್ಗವಾಯಿತು. ಹೀಗಾಗಿ ಅವರ ಕುಟುಂಬ ಜೈಪುರಕ್ಕೆ ಸ್ಥಳಾಂತರಗೊಳ್ಳಬೇಕಾಯಿತು. ಆದರೂ ಸುರೇಂದರ್‌ ಮಗಳು ಭಾರತ ತಂಡಕ್ಕೆ ಆಡುವುದನ್ನು ನೋಡುವ ಆಸೆ ಕೈಚೆಲ್ಲಲಿಲ್ಲ. ತಾವು ಉಳಿಸಿದ ಹಣವನ್ನೆಲ್ಲಾ ಸೇರಿಸಿ ಜೈಪುರದಲ್ಲಿ ಜಮೀನು ಖರೀಸಿದರು. ಅದನ್ನು ಸಣ್ಣ ಕ್ರಿಕೆಟ್‌ ಮೈದಾನವನ್ನಾಗಿ ಪರಿವರ್ತಿಸಿದರು. ಪ್ರಿಯಾ ಪ್ರಕಾರ ಪಿಚ್‌ನಿಂದ ಬೌಂಡರಿಗೆ ಅಂದಾಜು 37 ಮೀಟರ್‌ ದೂರವಿದೆ. ವೃತ್ತಿಪರ ಪಂದ್ಯಗಳಿಗೆ ಆತಿಥ್ಯ ವಹಿಸುವ ಕ್ರೀಡಾಂಗಣದಷ್ಟುದೊಡ್ಡದಿರದಿದ್ದರೂ, ಅಭ್ಯಾಸಕ್ಕೆ ಈ ಮೈದಾನ ಸಾಕು ಎನ್ನುತ್ತಾರೆ ಪ್ರಿಯಾ.

ಏಕದಿನ ಟೂರ್ನಿಯಲ್ಲಿ ಮಿಂಚು: ಪ್ರಿಯಾ ಸದ್ಯ ಚಾಲ್ತಿಯಲ್ಲಿರುವ ಅಂತರ ರಾಜ್ಯ ಏಕದಿನ ಟೂರ್ನಿಯಲ್ಲಿ ಮಿಂಚು ಹರಿಸುತ್ತಿದ್ದಾರೆ. ಟೂರ್ನಿಯಲ್ಲಿ 2 ಶತಕಗಳೊಂದಿಗೆ 400ಕ್ಕೂ ಹೆಚ್ಚು ರನ್‌ ಕಲೆಹಾಕಿರುವ ಪ್ರಿಯಾ, ರಾಹುಲ್‌ ದ್ರಾವಿಡ್‌ ಹಾಗೂ ವಿರಾಟ್‌ ಕೊಹ್ಲಿ ಅಭಿಮಾನಿಯಂತೆ.

ಕೊಹ್ಲಿ ಕೋಚ್‌ ಬಳಿ ತರಬೇತಿ!

ವಿರಾಟ್‌ ಕೊಹ್ಲಿಯ ಬಾಲ್ಯದ ಕೋಚ್‌ ರಾಜ್‌ಕುಮಾರ್‌ ಶರ್ಮಾ ಬಳಿಯೇ ಪ್ರಿಯಾ ಸಹ ಕ್ರಿಕೆಟ್‌ನ ಆರಂಭಿಕ ಪಾಠಗಳನ್ನು ಕಲಿತಿರುವುದು. ಪಶ್ಚಿಮ ದೆಹಲಿ ಕ್ರಿಕೆಟ್‌ ಅಕಾಡೆಮಿಯಲ್ಲಿ ಪ್ರಿಯಾ ಪ್ರತಿಭೆಯನ್ನು ಗುರುತಿಸಿದ್ದ ರಾಜ್‌ಕುಮಾರ್‌, ಈಕೆಗೆ ಭಾರತ ತಂಡಕ್ಕೆ ಆಡುವ ಸಾಮಥ್ಯವಿದೆ ಎಂದು ಭವಿಷ್ಯ ನುಡಿದಿದ್ದರಂತೆ.