ದ.ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಸೇರಿದಂತೆ ಇದುವರೆಗೆ ತವರಿನಲ್ಲಿ 18 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಕೊಹ್ಲಿ ಪಡೆ ಇದೀಗ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಹೈದರಾಬಾದ್(ಫೆ.08): ಟೆಸ್ಟ್'ಗೆ ಪಾದಾರ್ಪಣೆ ಮಾಡಿದ ಹದಿನಾರು ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿರುವ ಪ್ರವಾಸಿ ಬಾಂಗ್ಲಾದೇಶ ತಂಡದ ಎದುರು ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯ ಗುರುವಾರದಿಂದ ಆರಂಭವಾಗುತ್ತಿದ್ದು, ದಾಖಲೆಯ 19ನೇ ಗೆಲುವಿನ ಮೇಲೆ ಆತಿಥೇಯ ಟೀಂ ಇಂಡಿಯಾ ಲಕ್ಷ್ಯ ವಹಿಸಿದೆ.
ಇಲ್ಲಿನ ರಾಜೀವ್'ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯವು ತನ್ನ ಪಾಲಿಗೆ ಚಾರಿತ್ರಿಕವೆನಿಸಿರುವ ದಿಸೆಯಲ್ಲಿ ಮುಷ್ಪೀಕರ್ ರಹೀಮ್ ಬಳಗ ಆತಿಥೇಯರಿಗೆ ಆಘಾತ ನೀಡಲು ಕಾರ್ಯಯೋಜನೆ ಹಾಕಿಕೊಂಡಿದೆ.
ಹುಮ್ಮಸ್ಸಿನಲ್ಲಿ ಆತಿಥೇಯರು
ಇತ್ತೀಚಿನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನಷ್ಟೇ ಅಲ್ಲದೆ, ಸೀಮಿತ ಓವರ್‌ಗಳ ಸರಣಿಯಲ್ಲಿಯೂ ಹ್ಯಾಟ್ರಿಕ್ ಬಾರಿಸಿದ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ, ಬಾಂಗ್ಲಾದೇಶ ವಿರುದ್ಧವೂ ಜಯ ಸಾಧಿಸುವ ಹುಮ್ಮಸ್ಸಿನಲ್ಲಿದೆ. ದ.ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಸೇರಿದಂತೆ ಇದುವರೆಗೆ ತವರಿನಲ್ಲಿ 18 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಕೊಹ್ಲಿ ಪಡೆ ಇದೀಗ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಬಾಂಗ್ಲಾಗೆ ಮಹತ್ತರ ಗುರಿ
ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿರುವ ಮುಷ್ಫೀಕರ್ ರಹೀಮ್ ಪಡೆ ಈ ಐತಿಹಾಸಿಕ ಪಂದ್ಯದಲ್ಲಿ ಗೆಲ್ಲುವ ಮಹತ್ತರ ಗುರಿ ಹೊತ್ತಿದೆ. ಜತೆಗೆ ವಿದೇಶಿ ನೆಲದಲ್ಲಿನ ತನ್ನ ಪ್ರದರ್ಶನದ ಗುಣಮಟ್ಟವನ್ನು ಉನ್ನತೀಕರಿಸುವ ಸಂಕಲ್ಪವನ್ನೂ ತೊಟ್ಟಿದೆ. ಬಾಂಗ್ಲಾದೇಶ ಇಲ್ಲೀವರೆಗೆ ಆಡಿರುವ 44 ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಮೂರು ಪಂದ್ಯಗಳನ್ನಷ್ಟೆ. ಅಂದಹಾಗೆ ಬಾಂಗ್ಲಾ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ಗೆಲುವು ಸಾಧಿಸಿರುವುದು 2013ರ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ.
ಇನ್ನು, ಭಾರತ ಪ್ರವಾಸ ಕೈಗೊಳ್ಳುವ ಮುನ್ನ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ್ದ ಬಾಂಗ್ಲಾದೇಶ, ಆನಂತರದ ನ್ಯೂಜಿಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಸರಣಿ ಸೋಲನುಭವಿಸಿ ತಲ್ಲಣಿಸಿದೆ. ಹೀಗಾಗಿ ಭಾರತ ವಿರುದ್ಧದ ಈ ಏಕೈಕ ಟೆಸ್ಟ್ ಪಂದ್ಯವನ್ನು ಅದು ಗಂಭೀರವಾಗಿ ಪರಿಗಣಿಸಿದೆ.
ಕರುಣ್‌ಗಿಲ್ಲ ಜಾಗ?
ಅಂದಹಾಗೆ ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್'ನಲ್ಲಿ ತ್ರಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಕರುಣ್ ನಾಯರ್ ಬಾಂಗ್ಲಾದೇಶ ವಿರುದ್ಧದ ಈ ಟೆಸ್ಟ್ ಪಂದ್ಯದಿಂದ ಕೈಬಿಡುವುದು ಬಹುತೇಕ ಖಚಿತವೆನಿಸಿದೆ. ಸ್ವತಃ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಇದನ್ನು ಸ್ಪಷ್ಟಪಡಿಸಿದ್ದಾರೆ. ಗಾಯಾಳು ಅಜಿಂಕ್ಯ ರಹಾನೆ ತಂಡಕ್ಕೆ ಮರಳಿರುವುದು ಹಾಗೂ ಆಲ್ರೌಂಡರ್ ಜಯಂತ್ ಯಾದವ್ ಕೂಡ ಫಿಟ್ ಆಗಿರುವುದು ಇದಕ್ಕೆ ಕಾರಣ. ಆದಾಗ್ಯೂ ಇದು ಪಿಚ್'ನ ಸ್ಥಿತಿಗತಿಗನುಗುಣವಾಗಿ ನಿರ್ಧರಿತವಾಗಲಿದೆ. ಅಂದಹಾಗೆ ಇಲ್ಲಿನ ಪಿಚ್ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸ್ಪಂದಿಸಿದರೆ, ಕ್ರಮೇಣ ಸ್ಪಿನ್'ಮಯವಾಗಿ ತಿರುವು ಪಡೆಯಲಿದೆ. ಒಂದೊಮ್ಮೆ ಐವರು ಬೌಲರ್'ಗಳಿಗೆ ಭಾರತ ಅವಕಾಶ ಕಲ್ಪಿಸಿದರೆ, ಕರುಣ್ ಆಡುವ ಹನ್ನೊಂದು ಮಂದಿಯಲ್ಲಿ ಕಾಣಿಸಿಕೊಳ್ಳುವುದು ಕಷ್ಟಸಾಧ್ಯ.
ಸಂಭವನೀಯ ಆಟಗಾರರ ಪಟ್ಟಿ
ಭಾರತ
ಮುರಳಿ ವಿಜಯ್, ಕೆ.ಎಲ್. ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಾಹ (ವಿಕೆಟ್‌ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಭುವನೇಶ್ವರ್ ಕುಮಾರ್ ಮತ್ತು ಉಮೇಶ್ ಯಾದವ್.
ಬಾಂಗ್ಲಾದೇಶ
ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮೊಮಿನಲ್ ಹಕ್, ಮಹಮುದುಲ್ಲಾ, ಶಕೀಬ್ ಅಲ್ ಹಸನ್, ಮುಷ್ಫೀಕರ್ ರಹೀಮ್ (ನಾಯಕ/ವಿಕೆಟ್‌ಕೀಪರ್), ಶಬ್ಬೀರ್ ರೆಹಮಾನ್, ಮೆಹ್ದಿ ಹಸನ್ ಮಿರಾಜ್, ಟಸ್ಕಿನ್ ಅಹಮದ್, ತೈಜುಲ್ ಇಸ್ಲಾಮ್ ಮತ್ತು ಶಫೀಯುಲ್ ಇಸ್ಲಾಮ್.
ಪಂದ್ಯ ಆರಂಭ: ಬೆಳಿಗ್ಗೆ 9.30
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್
