ಚೆಲ್ಮ್ಸ್‌ಫೋರ್ಡ್(ಜು.27): ಭಾರತ ಹಾಗೂ ಎಸೆಕ್ಸ್ ನಡುವಿನ ಏಕೈಕ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಮೇಲುಗೈ ಸಾಧಿಸಿರೋದು ಕೊಹ್ಲಿ ಸೈನ್ಯದ ಆತ್ಮವಿಶ್ವಾಸ ಹೆಚ್ಚಿಸಿದೆ.

3ದಿನಗಳ ಅಭ್ಯಾಸ ಪಂದ್ಯದಲ್ಲಿ ಆರಂಭದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ 395 ರನ್‌ಗೆ ಆಲೌಟ್ ಆಗಿತ್ತು. ಮುರಳಿ ವಿಜಯ್ 53, ನಾಯಕ ವಿರಾಟ್ ಕೊಹ್ಲಿ 68, ಕೆಎಲ್ ರಾಹುಲ್ 58, ದಿನೇಶ್ ಕಾರ್ತಿಕ್ 82, ಹಾರ್ದಿಕ್ ಪಾಂಡ್ಯ 51 ಹಾಗೂ ರಿಷಬ್ ಪಂತ್ ಅಜೇಯ 34 ರನ್ ಸಿಡಿಸಿದ್ದರು.

ಭಾರತದ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ಎಸೆಕ್ಸ್ ಹೋರಾಟ ನಡೆಸಿತು. ಆದರೆ ಟೀಂ ಇಂಡಿಯಾ ವೇಗಿಗಳ ಪರಾಕ್ರಮದಿಂದ ಎಸೆಕ್ಸ್ ತಂಡ 8 ವಿಕೆಟ್ ನಷ್ಟಕ್ಕೆ 359 ರನ್‌ ಸಿಡಿಸಿ ಡಿಕ್ಲೇರ್ ಘೋಷಿಸಿತು. ಉಮೇಶ್ ಯಾದವ್ 4, ಇಶಾಂತ್ ಶರ್ಮಾ 3 ಹಾಗೂ ಶಾರ್ದೂಲ್ ಠಾಕೂರ್ 1 ವಿಕೆಟ್ ಕಬಳಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ 36 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. ಶಿಖರ್ ಧವನ್ ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ಆದರೆ ಕೆಎಲ್ ರಾಹುಲ್ ಹಾಗೂ ಚೇತೇಶ್ವರ್ ಪೂಜಾರ ಚೇರಿಕೆ ನೀಡಿದರು. ಪೂಜಾರ 23 ರನ್ ಸಿಡಿಸಿ ಔಟಾದರು.

ರಾಹುಲ್ ಅಜೇಯ 36 ಹಾಗೂ ಅಜಿಂಕ್ಯ ರಹಾನೆ  ಅಜೇಯ 19 ರನ್ ಸಿಡಿಸಿದರು. ಈ ಮೂಲಕ ಭಾರತ 125 ರನ್‌ಗಳ ಮುನ್ನಡೆ ಪಡೆಯಿತು. ಈ ವೇಳೆ ಸುರಿದ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು.  ಅಂತಿಮ ಸೆಶನ್ ಬಾಕಿ ಇದ್ದರೂ, ಮಳೆಯಿಂದಾಗಿ ಪಂದ್ಯವನ್ನ ಡ್ರಾ ಎಂದು ಘೋಷಿಸಲಾಯಿತು.