ದೋಹಾ ಡೈಮಂಡ್‌ ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದ ಒಲಿಂಪಿಕ್ ಚಾಂಪಿಯನ್ನೀರಜ್ ಚೋಪ್ರಾ ಸಾಧನೆ ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ(ಮೇ.06): ಒಲಿಂಪಿಕ್‌ ಜಾವೆಲಿನ್ ಥ್ರೋ ಚಾಂಪಿಯನ್‌ ನೀರಜ್ ಚೋಪ್ರಾ, 2023ರ ಋತುವನ್ನು ಭರ್ಜರಿಯಾಗಿಯೇ ಆರಂಭಿಸಿದ್ದು, ದೋಹಾ ಡೈಮಂಡ್‌ ಲೀಗ್ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ನೀರಜ್ ಚೋಪ್ರಾ ಸಾಧನೆಯನ್ನು ಕೊಂಡಾಡಿದ್ದು, ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಟೋಕಿಯೋ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ, ದೋಹಾ ಡೈಮಂಡ್‌ ಲೀಗ್‌ ಸ್ಪರ್ಧೆಯ ಮೊದಲ ಪ್ರಯತ್ನದಲ್ಲಿಯೇ 88.67 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ವರ್ಷದ ಮೊದಲ ಪ್ರಯತ್ನದಲ್ಲಿಯೇ ಮೊದಲ ಸ್ಥಾನ ಪಡೆದ ನೀರಜ್ ಚೋಪ್ರಾ ಸಾಧನೆಯನ್ನು ಪ್ರಧಾನಿ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ವರ್ಷದ ಮೊದಲ ಟೂರ್ನಿ ಮತ್ತು ಮೊದಲ ಸ್ಥಾನ! ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್‌ ಚೋಪ್ರಾ 88.67 ಮೀಟರ್ ಥ್ರೋ ಮಾಡುವ ಮೂಲಕ ವರ್ಲ್ಡ್‌ ಲೀಡ್‌ ಸಾಧಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಅವರಿಗೆ ಒಳಿತಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.

Scroll to load tweet…

ಇನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ಕೂಡಾ ನೀರಜ್‌ ಚೋಪ್ರಾ ಸಾಧನೆಯನ್ನು ಕೊಂಡಾಡಿದ್ದಾರೆ. "ನೀರಜ್‌ ಚೋಪ್ರಾ ಗೆಲುವು.! 88.67 ಮೀಟರ್ ದೂರ ಸಿಡಿಲಿನ ಥ್ರೋ ಮೂಲಕ ಅದ್ಭುತ ಪ್ರದರ್ಶನದೊಂದಿಗೆ ಭಾರತಕ್ಕೆ ವೈಭವನ್ನು ಮರಳಿ ತಂದುಕೊಟ್ಟ ನಿಜವಾದ ಚಾಂಪಿಯನ್‌. ಅವರ ಸಾಧನೆಯ ಬಗ್ಗೆ ಇಡೀ ದೇಶವೇ ಮತ್ತೊಮ್ಮೆ ಹೆಮ್ಮೆ ಪಡುತ್ತಿದೆ. ಅದ್ಭುತ ಜಯ ಸಾಧಿಸಿದ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು ಎಂದು ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.

Scroll to load tweet…

ತುಂಬಾ ಕುತೂಹಲಕಾರಿ ಸಂಗತಿಯೆಂದರೆ, 2018ರಲ್ಲಿ ದೋಹಾದಲ್ಲಿಯೇ ನಡೆದಿದ್ದ ಮೊದಲ ಸುತ್ತಿನ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ನೀರಜ್ ಚೋಪ್ರಾ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ನೀರಜ್ ಚೋಪ್ರಾ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

Doha Diamond League: ಘಟಾನುಘಟಿಗಳನ್ನು ಹಿಂದಿಕ್ಕಿ ಚಿನ್ನ ಗೆದ್ದ ನೀರಜ್ ಚೋಪ್ರಾ

ಈ ಬಾರಿಯ ಡೈಮಂಡ್ ಲೀಗ್ ಟೂರ್ನಿಯಲ್ಲಿ ಟೋಕಿಯೋ ಒಲಿಂಪಿಕ್ಸ್‌ ಬೆಳ್ಳಿ ವಿಜೇತ ಚೆಕ್‌ ಗಣ​ರಾ​ಜ್ಯದ ಜಾಕುಬ್‌ ವೆಡ್ಲ್‌ಜೆಕ್‌, ನೀರಜ್‌ ಚೋಪ್ರಾಗೆ ತುರುಸಿನ ಪೈಪೋಟಿ ನೀಡಿದರು. ಜಾಕುಬ್ ಎರಡನೇ ಪ್ರಯತ್ನದಲ್ಲಿ 88.63 ಮೀಟರ್ ದೂರ ಎಸೆದರಾದರೂ, ನೀರಜ್ ಚೋಪ್ರಾ ಅವರಿಗಿಂತ ಕೇವಲ 4 ಸೆಂಟಿಮೀಟರ್ ಕಡಿಮೆ ದೂರ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಚೆಕ್‌ ಗಣ​ರಾ​ಜ್ಯದ ಜಾಕುಬ್‌ ವೆಡ್ಲ್‌ಜೆಕ್‌, ಟೋಕಿಯೋ ಒಲಿಂಪಿಕ್ಸ್‌ನಲ್ಲಿಯೂ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇನ್ನು ಕಳೆದ ವರ್ಷ ನಡೆದ ದೋಹಾ ಡೈಮಂಡ್ ಲೀಗ್ ಟೂರ್ನಿಯಲ್ಲಿ ಜಾಕುಬ್‌ ವೆಡ್ಲ್‌ಜೆಕ್‌, 90.88 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಜಯಿಸಿದ್ದರು.

ಇನ್ನು ಕಳೆದ ಆವೃತ್ತಿಯ ದೋಹಾ ಡೈಮಂಡ್ ಲೀಗ್ ಟೂರ್ನಿಯಲ್ಲಿ ಬರೋಬ್ಬರಿ 93.07 ಮೀಟರ್ ದೂರ ಎಸೆಯುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಗ್ರೆನಾಡದ ಆ್ಯಂಡ​ರ್‌​ಸನ್‌ ಪೀಟರ್ಸ್‌, ಈ ಬಾರಿ ಕೇವಲ 85.88 ಮೀಟರ್ ದೂರ ಜಾವೆಲಿನ್ ಎಸೆಯಲಷ್ಟೇ ಶಕ್ತರಾದರು.

ನೀರಜ್ ಚೋಪ್ರಾ, ತಮ್ಮ ವೃತ್ತಿಜೀವನದಲ್ಲಿ 89.94 ಮೀಟರ್ ದೂರ ಎಸೆದಿರುವುದು ಅವರ ಶ್ರೇಷ್ಠ ಪ್ರದರ್ಶನವಾಗಿದೆ. ಈ ಬಾರಿ 90 ಮೀಟರ್ ದೂರ ನೀರಜ್ ಚೋಪ್ರಾ ಥ್ರೋ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ 90 ಮೀಟರ್ ದೂರ ಎಸೆಯದಿದ್ದರೂ, ಚಾಂಪಿಯನ್ ಪಟ್ಟ ಅಲಂಕರಿಸಲು ನೀರಜ್ ಚೋಪ್ರಾ ಯಶಸ್ವಿಯಾದರು.