ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಸಂವಾದ ನಡೆಸಿದರು. ಈ ವೇಳೆ, ಬಾಕ್ಸರ್‌ಗಳಾದ ಲವ್ಲೀನಾ, ನರೇಂದರ್ ಬರ್ವಾಲ್ ಹಂಚಿಕೊಂಡ ಸ್ವಾರಸ್ಯಕರ ಸಂಗತಿಗಳು ಹಾಗೂ ಮೀರಾಬಾಯಿ ಚಾನು ಅವರ ಸವಾಲಿನ ಪಯಣದಂತಹ ಹಲವು ವಿಷಯಗಳನ್ನು ಕ್ರೀಡಾಪಟುಗಳು ಹಂಚಿಕೊಂಡರು.
ನವದೆಹಲಿ: ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತರು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಈ ವೇಳೆ ಪ್ರಧಾನಿ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು ಹಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡರು.
ಗ್ಲಾಸ್ಗೋದ ರೆಸ್ಟೋರೆಂಟ್‌ವೊಂದರಲ್ಲಿ ಭಾರತದ ನಕ್ಷೆಯಲ್ಲಿ ಈಶಾನ್ಯ ರಾಜ್ಯಗಳನ್ನೇ ಇಲ್ಲದಿರುವುದನ್ನು ಗುರುತಿಸಿದ್ದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್, ಅದನ್ನು ಮಾಲಿಕರ ಗಮನಕ್ಕೆ ತಂದಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಈ ನಡೆಗೆ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ, ತಮ್ಮ ಪದಕವನ್ನು ಸೈನಿಕರಿಗೆ ಅರ್ಪಿಸಿದ, ಪ್ರಸ್ತುತ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಜಾದುಮಣಿ ಸಿಂಗ್ ಬಗ್ಗೆಯೂ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದರು.
ಬಾಕ್ಸರ್ ನರೇಂದರ್ ಬರ್ವಾಲ್ ಅವರು ಪಾಕಿಸ್ತಾನಿ ಜತೆಗೆ ಕಳೆದ ಸ್ವಾರಸ್ಯಕರ ಸಂಗತಿಯೊಂದನ್ನು ಹಂಚಿಕೊಂಡರು. ‘2015ರಲ್ಲಿ ವಿಶ್ವ ಮಿಲಿಟರಿ ಕ್ರೀಡಾಕೂಟದ ಸಂದರ್ಭದಲ್ಲಿ ಪಾಕಿಸ್ತಾನಿ ಬಾಕ್ಸರ್ ಜತೆ ವೈದ್ಯಕೀಯ ಕೊಠಡಿಯಲ್ಲಿ ಒಟ್ಟಿಗೆ ಇದ್ದಾಗ ಆತ ನಿಮ್ಮ ಹೆಸರು ನರೇಂದರ್, ನಿನ್ನ ಕೋಚ್ ಸಹ ನರೇಂದರ್, ನಿಮ್ಮ ಪ್ರಧಾನಿಯೂ ನರೇಂದ್ರ. ಈ ನರೇಂದ್ರ ಎಂಬ ಹೆಸರನ ಬಗ್ಗೆಯೇ ನನಗೆ ನನಗೆ ದ್ವೇಷ ಬಂದು ಬಿಟ್ಟಿದೆ’ ಎಂದಿದ್ದರು ಎಂದು ನೆನಪಿಸಿಕೊಂಡರು. ಇದನ್ನು ಕೇಳಿ ಮೋದಿ ನಗೆ ಬೀರಿದರು. ಅಲ್ಲದೆ, ಭಾರತೀಯ ಬಾಕ್ಸರ್‌ಗಳನ್ನು ನೋಡಿ ಎಲ್ಲರೂ ಹೆದರಿದ್ದರು ಎಂದು ಬಾಕ್ಸರ್ ಸಾಕ್ಷಿ ಚೌಧರಿ ಅನುಭವ ಹಂಚಿಕೊಂಡರು. ಇನ್ನು ಸತತ ಮೂರನೇ ಸಲ ಚಿನ್ನಕ್ಕೆ ಮುತ್ತಿಟ್ಟ ಮೀರಾಬಾಯಿ ಚಾನು ಅವರು ತಮ್ಮ ಬಾವುಕ ಕ್ಷಣಗಳನ್ನು, ಕಳೆದ 4 ವರ್ಷಗಳಲ್ಲಿ ತಾವು ಎದುರಿಸಿದ ಕಠಿಣ ಸವಾಲುಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಕ್ರೀಡಾ ಇಲಾಖೆ ರಾಜ್ಯ ಸಚಿವೆ ರಕ್ಷಾ ಖಡ್ಸೆ ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿಟಿ ಉಷಾ ಕೂಡ ಉಪಸ್ಥಿತರಿದ್ದರು.
ಕಾಮನ್ವೆಲ್ತ್ ಪದಕ ವಿಜೇತರಿಗೆ ಮೋದಿ ಅಭಿನಂದನೆ
ನವದೆಹಲಿ: ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳು ಭಾನುವಾರ ಇಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದರು. ಕ್ರೀಡಾಪಟುಗಳ ಜೊತೆ ಕೆಲ ಕಾಲ ಸಮಾಲೋಚನೆ ನಡೆಸಿದ ಪ್ರಧಾನಿ, ಎಲ್ಲರನ್ನೂ ಅಭಿನಂದಿಸಿದರು.
ಇನ್‌ಸ್ಟಾಗ್ರಾಂನಲ್ಲಿ ಕಿರು ವಿಡಿಯೋವೊಂದನ್ನು ಹಂಚಿಕೊಂಡಿರುವ ಮೋದಿ, ಈ ಭೇಟಿಯನ್ನು ವಿಶೇಷ ಎಂದು ಕರೆದಿದ್ದಾರೆ. ಜೊತೆಗೆ ದೇಶಕ್ಕೆ ಹೆಮ್ಮೆ ತಂದ ಕ್ರೀಡಾಪಟುಗಳನ್ನು ಶ್ಲಾಘಿಸಿದ್ದಾರೆ. ಪ್ರಧಾನಿ ಜೊತೆ ಸಮಾಲೋಚನೆ ನಡೆಸಿದವರ ಪೈಕಿ ಬಾಕ್ಸಿಂಗ್ ಚಿನ್ನ ವಿಜೇತೆ ಸಾಕ್ಷಿ ಚೌಧರಿ ಕೂಡ ಒಬ್ಬರು. ಅವರು ‘ಪ್ರಧಾನಿ ನಮ್ಮನ್ನು ತುಂಬು ಹೃದಯದಿಂದ ಸ್ವಾಗತಿಸಿ, ಅಭಿನಂದಿಸಿದರು. ಅವರನ್ನು ಭೇಟಿಯಾಗಿದ್ದಕ್ಕೆ ನಮಗೆ ಬಹಳ ಹೆಮ್ಮೆ ಎನಿಸಿತು. ಅವರ ಸರಳ ವ್ಯಕ್ತಿತ್ವ ನಮ್ಮನ್ನು ಮೂಕವಿಸ್ಮಿತಗೊಳಿಸಿತು’ ಎಂದಿದ್ದಾರೆ.
ಅಥ್ಲೀಟ್‌ಗಳ ಜೊತೆ ಸಂವಾದ ನಡೆಸುವ ವೇಳೆ ಮೋದಿ, ‘ಯಾರು ಆಡುತ್ತಾರೋ, ಅವರು ಅರಳುತ್ತಾರೆ’ ಎಂಬ ಸಂದೇಶದ ಮೂಲಕ ಅಲ್ಲಿದ್ದ ಎಲ್ಲರನ್ನೂ ಹುರಿದುಂಬಿಸಿದರು. 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 10 ಚಿನ್ನ ಸೇರಿ ಒಟ್ಟು 39 ಪದಕಗಳನ್ನು ಜಯಿಸಿತು.


