PKL 7: ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಯೋಧಾ
ಪ್ರೊ ಕಬಡ್ಡಿಯಲ್ಲಿ ಬಲಿಷ್ಠ ದಬಾಂಗ್ ಡೆಲ್ಲಿ ತಂಡವನ್ನು ಮಣಿಸುವುದರೊಂದಿಗೆ ಯು.ಪಿ.ಯೋಧಾ ತಂಡವು ಪ್ಲೇ ಆಫ್ ಹಂತ್ ಪ್ರವೇಶಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಗ್ರೇಟರ್ ನೋಯ್ಡಾ(ಅ.06): ಪ್ರೊ ಕಬಡ್ಡಿ 7ನೇ ಆವೃತಿಯ ಪ್ಲೇ ಆಫ್ ಹಂತಕ್ಕೆ ಯು.ಪಿ ಯೋಧಾ ತಂಡ ಪ್ರವೇಶಿಸಿದೆ. ಶನಿವಾರ ಇಲ್ಲಿ ನಡೆದ ತವರಿನ ಚರಣದ ಮೊದಲ ಪಂದ್ಯದಲ್ಲೇ ದಬಾಂಗ್ ಡೆಲ್ಲಿ ವಿರುದ್ಧ 50-33ರಲ್ಲಿ ಭರ್ಜರಿ ಜಯ ಸಾಧಿಸಿತು. ಈ ಆವೃತ್ತಿಯಲ್ಲಿ 11ನೇ ಗೆಲುವು ಸಾಧಿಸಿದ ಯೋಧಾ, 6ನೇ ತಂಡವಾಗಿ ಪ್ಲೇ-ಆಫ್‌ಗೇರಿತು.
ಪ್ರೊ ಕಬಡ್ಡಿ: ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಟೈಟಾನ್ಸ್
ಪ್ಲೇ-ಆಫ್‌ನಲ್ಲಿ ಆಡುವ 6 ತಂಡಗಳು ಯಾವ್ಯಾವು ಎನ್ನುವುದು ಅಂತಿಮಗೊಂಡಿದ್ದು, ಇನ್ನೇನಿದ್ದರೂ ಸ್ಥಾನಗಳು ನಿರ್ಧಾರವಾಗಬೇಕಿದೆ. ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಕಾಯ್ದುಕೊಳ್ಳುವುದು ಬಹುತೇಕ ಖಚಿತವಾಗಿದ್ದು, ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿವೆ. ಅಂಕಪಟ್ಟಿಯಲ್ಲಿ 3ನೇ ಹಾಗೂ 6ನೇ ಸ್ಥಾನ ಪಡೆಯುವ ತಂಡಗಳು ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಎದುರಾದರೆ, 4 ಹಾಗೂ 5ನೇ ಸ್ಥಾನ ಪಡೆಯುವ ತಂಡಗಳು 2ನೇ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಲಿವೆ. ಎಲಿಮಿನೇಟರ್ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿವೆ.
ಹರ್ಯಾಣ ಮಣಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದ ಬೆಂಗಳೂರು ಬುಲ್ಸ್!
ಶನಿವಾರದ ಪಂದ್ಯದಲ್ಲಿ ಡೆಲ್ಲಿ ತಂಡ ತಮ್ಮ ಪ್ರಮುಖ ಆಟಗಾರರಾದ ನವೀನ್ ಕುಮಾರ್, ಜೋಗಿಂದರ್ ನರ್ವಾಲ್, ರವೀಂದರ್ ಪೆಹಲ್, ಚಂದ್ರನ್ ರಂಜಿತ್‌ಗೆ ವಿಶ್ರಾಂತಿ ನೀಡಿತ್ತು. ಹೊಸ ಆಟಗಾರರನ್ನು ಕಣಕ್ಕಿಳಿಸಿದ್ದು, ಯೋಧಾಗೆ ಅನುಕೂಲವಾಯಿತು. ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿದ ಯೋಧಾ 17 ಅಂಕಗಳಲ್ಲಿ ಗೆಲುವು ಸಾಧಿಸಿತು.
ಯೋಧಾ ಪರ ರೈಡರ್ ಮೋನು ಗೋಯತ್ 11 ಅಂಕ ಗಳಿಸಿದರೆ, ಶ್ರೀಕಾಂತ್ ಜಾಧವ್ 9 ಅಂಕ ಕಲೆಹಾಕಿದರು. ಯುವ ಡಿಫೆಂಡರ್ ನಿತೇಶ್ ಕುಮಾರ್ 6 ಟ್ಯಾಕಲ್ ಅಂಕ ಸಂಪಾದಿಸಿದರು. ಡೆಲ್ಲಿ ಪರ ಯುವ ರೈಡರ್ ನೀರಜ್ ನರ್ವಾಲ್ 10 ಅಂಕ ಗಳಿಸಿದರೆ, ಡಿಫೆಂಡರ್ ಸೋಮ್‌ಬೀರ್ 6 ಅಂಕ ಗಳಿಸಿದರು.
ಗುಜರಾತ್ ವಿರುದ್ಧ ಪಾಟ್ನಾಗೆ ಗೆಲುವು
3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಶನಿವಾರ ನಡೆದ 2ನೇ ಪಂದ್ಯದಲ್ಲಿ 2 ಬಾರಿ ರನ್ನರ್-ಅಪ್ ತಂಡ ಗುಜರಾತ್ ಫಾರ್ಚೂನ್‌ಜೈಂಟ್ಸ್ ವಿರುದ್ಧ 39-33 ಅಂಕಗಳ ಗೆಲುವು ಸಾಧಿಸಿತು. ಪಾಟ್ನಾ ಪರ ತಾರಾ ರೈಡರ್ ಪ್ರದೀಪ್ ನರ್ವಾಲ್ 17 ಅಂಕ ಗಳಿಸಿ ಗಮನ ಸೆಳೆದರು. ಅಂಕಪಟ್ಟಿಯಲ್ಲಿ ಗುಜರಾತ್ 9ನೇ ಸ್ಥಾನದಲ್ಲಿದ್ದರೆ, ಪಾಟ್ನಾ 10ನೇ ಸ್ಥಾನದಲ್ಲಿ ಉಳಿದುಕೊಂಡಿದೆ.