"ಪಿಸಿಬಿಗೆ ಆಗಿರುವ ನಷ್ಟದ ಹಿನ್ನೆಲೆಯಲ್ಲಿ ಭಾರತಕ್ಕೆ ತಕ್ಕ ಶಾಸ್ತಿ ಮಾಡಬೇಕು. ಈ ನಿಟ್ಟಿನಲ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಹೊಂದಿರುವ ಶ್ರೇಯಾಂಕ ಸಾಧನೆಯಲ್ಲಿ ಪಾಕಿಸ್ತಾನಕ್ಕೂ ಪಾಲು ನೀಡಬೇಕು’’- ನಿಜಾಮ್ ಸೇಥಿ,ಪಿಸಿಬಿ ಕಾರ್ಯದರ್ಶಿ

ಕರಾಚಿ(ನ.09): 2007ರಿಂದ ಈವರೆಗೂ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಸಲು ಹಿಂದೇಟು ಹಾಕುತ್ತಿರುವ ಭಾರತೀಯ ಕ್ರಿಕೆಟ್ ಮಂಡಳಿಯು (ಬಿಸಿಸಿಐ) ಸರಣಿ ಕುರಿತಂತೆ ತನ್ನ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಖಡಾಖಂಡಿತವಾಗಿ ಕೇಳಿದೆ. ಅಲ್ಲದೆ, ಸರಣಿ ನೆನೆಗುದಿಯಿಂದ ತನಗಾದ ನಷ್ಟವನ್ನು ಬಿಸಿಸಿಐ ಭರಿಸಬೇಕು ಎಂದು ಅದು ಆಗ್ರಹಿಸಿದೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಿಸಿಬಿ ಕಾರ್ಯದರ್ಶಿ ನಿಜಾಮ್ ಸೇಥಿ, ‘‘ಇತ್ತೀಚೆಗೆ ಕೇಪ್‌ಟೌನ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದ ವೇಳೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರನ್ನು ಸರಣಿ ಕುರಿತಂತೆ ಕೇಳಿದರೂ ನೇರ ಉತ್ತರ ಕೊಡದೆ ಅಸ್ಪಷ್ಟ ಯೋಜನೆಗಳನ್ನು ಚರ್ಚಿಸಿದರು. ಈ ಹಿಂದೆ, ಪಿಸಿಬಿ, ಬಿಸಿಸಿಐ ನಡುವಿನ ಕರಾರಿನಂತೆ 2007ರಿಂದ ನಡೆಯಬೇಕಿದ್ದ ದ್ವಿಪಕ್ಷೀಯ ಸರಣಿಯು ನೆನೆಗುದಿಗೆ ಬಿದ್ದಿರುವುದರಿಂದ ಪಿಸಿಬಿ ಸಾಕಷ್ಟು ನಷ್ಟ ಅನುಭವಿಸಿದೆ. ಇನ್ನು, ಸರಣಿ ಬಗ್ಗೆ ಪಿಸಿಬಿಯು ನಿರೀಕ್ಷೆ ಇಟ್ಟುಕೊಳ್ಳಲಾರದು. ಆದಷ್ಟು ಬೇಗನೇ ಬಿಸಿಸಿಐಯು ದ್ವಿಪಕ್ಷೀಯ ಸರಣಿ ಬಗ್ಗೆ ತನ್ನ ಸ್ಪಷ್ಟ ನಿಲುವನ್ನು ವ್ಯಕ್ತಗೊಳಿಸಬೇಕು. ಐಸಿಸಿಯು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆಯಲ್ಲದೆ, ಪಿಸಿಬಿಗೆ ಆಗಿರುವ ನಷ್ಟದ ಹಿನ್ನೆಲೆಯಲ್ಲಿ ಭಾರತಕ್ಕೆ ತಕ್ಕ ಶಾಸ್ತಿ ಮಾಡಬೇಕು. ಈ ನಿಟ್ಟಿನಲ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಹೊಂದಿರುವ ಶ್ರೇಯಾಂಕ ಸಾಧನೆಯಲ್ಲಿ ಪಾಕಿಸ್ತಾನಕ್ಕೂ ಪಾಲು ನೀಡಬೇಕು’’ ಎಂದು ಆಗ್ರಹಿಸಿದ್ದಾರೆ.