ಮೊದಲಾರ್ಧ ಮುಕ್ತಾಯದ ವೇಳೆಗೆ ಪಾಟ್ನಾ 23-11 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು.
ನಾಗ್ಪುರ(ಆ.06): ಪಾಟ್ನಾ ಪೈರೇಟ್ಸ್ ನಾಯಕ ಪರ್'ದೀಪ್ ನರ್ವಾಲ್ ಆಕ್ರಮಣಕಾರಿಯಾಟದ ನೆರವಿನಿಂದ ಬೆಂಗಳೂರು ಬುಲ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್ 46-32 ಅಂಕಗಳ ಅಂತರದಲ್ಲಿ ಜಯಭೇರಿ ಬಾರಿಸಿದೆ. ರೋಹಿತ್ ಕುಮಾರ್ ನೇತೃತ್ವದ ಬುಲ್ಸ್ ಪಡೆ ಸತತ ಎರಡನೇ ಸೋಲು ಕಂಡಿತು.
ಇಲ್ಲಿನ ಮಂಕಾಪುರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಎರಡನೇ ನಿಮಿಷದಲ್ಲಿ ಪಾಟ್ನಾ ತಂಡದ ಮನು ಗೋಯತ್ ಅವರನ್ನು ಟ್ಯಾಕಲ್ ಮಾಡುವ ಮೂಲಕ ಬುಲ್ಸ್ ಮೊದಲ ಅಂಕ ಕಲೆಹಾಕಿತು. ಬಳಿಕ ರೋಹಿತ್ ಕುಮಾರ್ ಯಶಸ್ವಿ ರೈಡಿಂಗ್‌ನಿಂದ 2-0 ಅಂಕಗಳಿಸಿದರು. ಅತ್ತ ಪಾಟ್ನಾ 3ನೇ ನಿಮಿಷದಲ್ಲಿ ಖಾತೆ ತೆರೆಯಿತು. 7ನೇ ನಿಮಿಷದಿಂದಲೂ ಮುನ್ನಡೆ ಸಾಧಿಸಿದ ಪರ್'ದೀಪ್ ಪಡೆ ಅಂಕಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಪಾಟ್ನಾ 23-11 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು.
ಇನ್ನು ದ್ವಿತಿಯಾರ್ಧದಲ್ಲೂ ಆಕರ್ಷಕ ದಾಳಿ ಸಂಘಟಿಸಿದ ಪರ್'ದೀಪ್ ಪಡೆ ಅಂತಿಮವಾಗಿ 46-32 ಅಂಕಗಳ ಅಂತರದ ಜಯ ದಾಖಲಿಸಿತು.
ವಾರಿಯರ್ಸ್ ದಾಳಿಗೆ ಸುಲಭ ತುತ್ತಾದ ಯುಪಿ ಯೋಧಾ
ಬೆಂಗಳೂರು ಬುಲ್ಸ್ ಮಣಿಸಿ ಆತ್ಮವಿಶ್ವಾಸದಿಂದ ಕಣಕ್ಕಿಳಿದಿದ್ದ ನಿತಿನ್ ತೋಮರ್ ನೇತೃತ್ವದ ಯುಪಿ ಯೋಧಾಗೆ ಮೊದಲ ಶಾಕ್ ಎದುರಾಗಿದೆ.
ಬೆಂಗಾಲ್ ವಾರಿಯರ್ಸ್ ಸಂಘಟಿತ ಪ್ರದರ್ಶನದಿಂದಾಗಿ 40-20 ಅಂಕಗಳಿಂದ ಯುಪಿ ಯೋಧಾ ವಿರುದ್ಧ ಭಾರೀ ಅಂತರದ ಗೆಲುವು ದಾಖಲಿಸಿದೆ.
ಬೆಂಗಾಲ್ ಪರ ರೈಡರ್ ವಿನೋದ್ ಕುಮಾರ್ (8 ಅಂಕ) ಜಾಂಗ್ ಕುನ್ ಲೀ (8 ಅಂಕ), ಮಣಿಂದರ್ ಸಿಂಗ್ (6 ಅಂಕ) ಗಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊದಲಾರ್ಧದಲ್ಲಿ 23-9 ಅಂಕಗಳಿಂದ ಮುನ್ನಡೆ ಸಾಧಿಸಿದ್ದ ವಾರಿಯರ್ಸ್ ಪಡೆ ದ್ವಿತಿಯಾರ್ಧದಲ್ಲೂ ಅದೇ ವೇಗದಲ್ಲಿ ಮುನ್ನಡೆದು 40-20 ಅಂಕಗಳ ಅಂತರದಲ್ಲಿ ಜಯ ದಾಖಲಿಸಿತು.
