ಪಲ್ಲೆಕೆಲೆ(ಆ.13): ಟೀಂ ಇಂಡಿಯಾ ಬೌಲರ್'ಗಳ ಕರಾರುವಕ್ಕಾದ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಮೊದಲ ಇನಿಂಗ್ಸ್'ನಲ್ಲಿ 135 ರನ್'ಗಳಿಗೆ ಸರ್ವಪತನ ಕಾಣುವ ಮೂಲಕ ಫಾಲೋ ಆನ್ ಬಲೆಗೆ ಸಿಲುಕಿದೆ. ಮತ್ತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ಎರಡನೇ ದಿನದಾಟದ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ 19 ರನ್'ಗಳಿಸಿ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೇ ಇನ್ನೂ 333ರನ್'ಗಳ ಹಿನ್ನಡೆ ಅನುಭವಿಸಿದೆ

ಟೀಂ ಇಂಡಿಯಾ ಮೊದಲ ಇನಿಂಗ್ಸ್'ನಲ್ಲಿ ಕಲೆಹಾಕಿದ್ದ 487ರನ್'ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾಗೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕ ಬ್ಯಾಟ್ಸ್'ಮನ್'ಗಳಾದ ದಿಮುತ್ ಕರುಣರತ್ನೆ(4) ಹಾಗೂ ಉಪುಲ್ ತರಂಗಾ(5) ಈ ಇಬ್ಬರೂ ಮೊಹಮ್ಮದ್ ಶಮಿ ಬೌಲಿಂಗ್'ನಲ್ಲಿ ವಿಕೆಟ್ ಕೀಪರ್ ಸಾಹಾಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಆಗ ಶ್ರೀಲಂಕಾ ತಂಡದ ಮೊತ್ತ 23 ಆಗಿತ್ತು. ಇನ್ನು ಆ ಬಳಿಕ ನಾಯಕ ಚಾಂಡಿಮಲ್ ತಂಡಕ್ಕೆ ಅಲ್ಪ ಚೇತರಿಕೆ ನೀಡಲು ಪ್ರಯತ್ನಿಸಿದರು. ಚಾಂಡಿಮಲ್'ಗೆ ವಿಕೆಟ್ ಕೀಪರ್ ಡಿಕ್'ವೆಲ್ಲಾ ಕೆಲಕಾಲ ಸಾಥ್ ನೀಡಿದರು. ಚಾಂಡಿಮಲ್ 48 ರನ್ ಬಾರಿಸಿ ಅಶ್ವಿನ್'ಗೆ ವಿಕೆಟ್ ಒಪ್ಪಿಸಿದರೆ, ಡಿಕ್'ವೆಲ್ಲಾ ವಿಕೆಟ್ ಕುಲ್ದೀಪ್ ಪಾಲಾಯಿತು. ಆ್ಯಂಜಲೋ ಮ್ಯಾಥ್ಯೂಸ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಲಂಕಾ ತಂಡದ ಮಧ್ಯಮ ಕ್ರಮಾಂಕದ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಬ್ಯಾಟಿಂಗ್ ಬೆನ್ನೆಲುಬು ಮುರಿಯುವಲ್ಲಿ ಕುಲ್ದೀಪ್ ಸಫಲವಾದರು. ಅಂತಿಮವಾಗಿ ಶ್ರೀಲಂಕಾ ಮೊದಲ ಇನಿಂಗ್ಸ್'ನಲ್ಲಿ 135ರನ್'ಗಳಿಗೆ ಸರ್ವಪತನ ಕಾಣುವ ಮೂಲಕ ಮತ್ತೆ ಫಾಲೋ ಆನ್ ಬಲೆಗೆ ಸಿಲುಕಿದೆ.

ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ಎಚ್ಚರಿಕೆಯ ಆಟವಾಡಲು ಪ್ರಯತ್ನಿಸಿತಾದರೂ ಉಮೇಶ್ ಯಾದವ್ ಮಿಂಚಿನ ದಾಳಿಗೆ ಉಫುಲ್ ತರಂಗಾ ಕ್ಲೀನ್ ಬೌಲ್ಡ್ ಆಗುವ ಮೂಲಕ ಮತ್ತೆ ನಿರಾಸೆ ಅನುಭವಿಸಿದರು. ಇನ್ನೂ ಮೂರನೇ ದಿನದಾಟಕ್ಕೆ ದಿಮುತ್ ಕರುಣರತ್ನೆ ಹಾಗೂ ನೈಟ್'ವಾಚ್'ಮನ್ ಮಿಲಿಂದಾ ಪುಷ್ಪಕುಮಾರ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು 6 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯ ಅವರ ಆಕರ್ಷಕ ಸಿಡಿಲಬ್ಬರದ ಶತಕದ ನೆರವಿನಿಂದ 487ರನ್ ಕಲೆಹಾಕಿತು. ವೃದ್ದಿಮಾನ್ ಸಾಹಾ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಸ್ಪೋಟಕ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ ಚೊಚ್ಚಲ ಶತಕ ಬಾರಿಸಿ ಸಂಭ್ರಮಿಸಿದರು. ಕೇವಲ 86 ಎಸೆತಗಳಲ್ಲಿ ಶತಕ ಪೂರೈಸಿದ ಪಾಂಡ್ಯ 108 ರನ್ ಬಾರಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು. ಪಾಂಡ್ಯಗೆ ಕೆಳಕ್ರಮಾಂಕದಲ್ಲಿ ಕುಲ್ದೀಪ್ 26 ಬಾರಿಸುವ ಮೂಲಕ ಉತ್ತಮ ಸಾಥ್ ನೀಡಿದರು.

ಸಂಕ್ಷಿಪ್ತ ಸ್ಕೋರ್:

ಭಾರತ

ಮೊದಲ ಇನಿಂಗ್ಸ್: 487/10

ಶಿಖರ್ ಧವನ್ : 119

ಹಾರ್ದಿಕ್ ಪಾಂಡ್ಯ : 108

ಲಕ್ಷಣ್ ಸಂದಕನ್ : 132/5

ಶ್ರೀಲಂಕಾ:

ಮೊದಲ ಇನಿಂಗ್ಸ್ : 135/10

ದಿನೇಶ್ ಚಾಂಡಿಮಲ್ : 48

ನಿರ್ಶೋನ್ ಡಿಕ್'ವೆಲ್ಲಾ : 29

ಕುಲ್ದೀಪ್ ಯಾದವ್ : 40/4  

ಶ್ರೀಲಂಕಾ ದ್ವಿತೀಯ ಇನಿಂಗ್ಸ್: 19/1

ಕರುಣರತ್ನೆ : 12*

ತರಂಗಾ : 7

ಉಮೇಶ್ ಯಾದವ್ : 3/1