ಬ್ರಿಸ್ಬೇನ್(ಡಿ. 18): ಆಸ್ಟ್ರೇಲಿಯಾ ಬೇಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ದಿಟ್ಟತನ ತೋರಿದಂತೆಯೇ ಪಾಕಿಸ್ತಾನ ಕೂಡ ದಿಟ್ಟತನದ ಬ್ಯಾಟಿಂಗ್ ಮೂಲಕ ಕಾಂಗರೂಗಳಿಗೆ ದಿಟ್ಟ ಉತ್ತರ ನೀಡಿದೆ. ಗೆಲ್ಲಲು 490 ರನ್'ಗಳ ಗುರಿ ಬೆಂಬತ್ತಿರುವ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 382 ರನ್ ಗಳಿಸಿದೆ. ಪಾಕ್ ಸೋಲಿಗೆ ಉಳಿದಿರುವುದು ಎರಡೇ ವಿಕೆಟ್. ಪಾಕ್ ಗೆಲುವಿಗೆ ಬೇಕಿರುವುದು ಇನ್ನೂ 108 ರನ್'ಗಳು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅಜೇಯ 100 ರನ್ ಗಳಿಸಿರುವ ಪಾಕಿಸ್ತಾನದ ನಂಬರ್ 6ನೇ ಆಟಗಾರ ಅಸದ್ ಶಫೀಕ್ ಒಬ್ಬರೇ ಆಸ್ಟ್ರೇಲಿಯಾದ ಗೆಲುವಿನ ದಾರಿಗೆ ಹೆಬ್ಬಂಡೆಯಂತೆ ನಿಂತಿದ್ದಾರೆ. ಬಾಲಂಗೋಚಿಗಳಾದ ಯಾಸಿರ್ ಶಾ ಮತ್ತು ರಾಹತ್ ಅಲಿ ನಾಳೆಯ ಕೊನೆಯ ದಿನದಂದು ಅಸದ್ ಶಫಿಕ್'ಗೆ ಎಷ್ಟರಮಟ್ಟಿಗೆ ಸಾಥ್ ನೀಡುತ್ತಾರೆ ಎಂಬುದರ ಮೇಲೆ ಪಂದ್ಯದ ರೋಚಕತೆ ನಿಂತಿದೆ. ಸೋಲಿನ ಸುಳಿಯಲ್ಲಿರುವ ಪಾಕಿಸ್ತಾನಕ್ಕೆ ಅಸದ್ ಶಫಿಕ್ ಹೊಸ ಆಶಾಕಿರಣವಾಗಿ ಕಾಣಿಸಿದ್ದು, ನಾಳೆ ಪವಾಡವನ್ನೇ ಮಾಡುವ ನಿರೀಕ್ಷೆ ಆತನ ಮೇಲಿದೆ.

ಎರಡು ವಿಕೆಟ್ ನಷ್ಟಕ್ಕೆ 70 ರನ್'ಗಳೊಂದಿಗೆ ನಾಲ್ಕನೇ ದಿನದಾಟ ಮುಂದುವರಿಸಿದ ಪಾಕಿಸ್ತಾನ ಮೂರನೇ ವಿಕೆಟ್'ಗೆ 145 ರನ್'ಗಳವರೆಗೂ ಮುಂದುವರಿಯಿತು. ಅಜರ್ ಅಲಿ ನಿರ್ಗಮನದೊಂದಿಗೆ ಪಾಕಿಸ್ತಾನ ತೀವ್ರ ಪ್ರತಿರೋಧ ಒಡ್ಡಬಹುದೆಂಬ ನಿರೀಕ್ಷೆಗಳು ಹುಸಿಯಾದವು. ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 145 ರನ್ ಇದ್ದ ಪಾಕಿಸ್ತಾನ 220 ರನ್'ಗೆ 6 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಸರ್ಫರಾಜ್ ಅಹ್ಮದ್, ಮೊಹಮ್ಮದ್ ಅಮಿರ್ ಮತ್ತು ವಹಾಬ್ ರಿಯಾಜ್ ಅವರು ಅಸದ್ ಶಫಿಕ್'ಗೆ ಸರಿಯಾದ ಜೊತೆಯಾಟದ ನೆರವು ಒದಗಿಸಿದರು. ಇದರಿಂದಾಗಿ ಪಾಕಿಸ್ತಾನದ ಸ್ಕೋರು 382 ರನ್'ಗೆ ಉಬ್ಬಲು ಸಾಧ್ಯವಾಯಿತು.

ಇಂದಿನ ಪಂದ್ಯದಲ್ಲಿ ಪಾಕಿಸ್ತಾನದಿಂದ ಎರಡು ಪ್ರಮುಖ ದಾಖಲೆಗಳು ಬಂದದ್ದು ಗಮನಾರ್ಹ. ಪಾಕಿಸ್ತಾನ ತನ್ನ 2ನೇ ಇನ್ನಿಂಗ್ಸಲ್ಲಿ 382 ರನ್ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಗಾಬ್ಬಾ ಮೈದಾನದಲ್ಲಿ ನಾಲ್ಕನೇ ಇನ್ನಿಂಗ್ಸಲ್ಲಿ ತಂಡವೊಂದು ಗಳಿಸಿರುವ ಅತ್ಯಧಿಕ ಮೊತ್ತದ ಇದಾಗಿದೆ.

ಅಷ್ಟೇ ಅಲ್ಲ, ಅಸದ್ ಶಫಿಕ್ ಅವರು ವಿಂಡೀಸ್ ದಿಗ್ಗಜ ಗ್ಯಾರಿ ಸೋಬರ್ಸ್ ದಾಖಲೆಯನ್ನು ಮುರಿದುಹಾಕಿದ್ದಾರೆ. ನಂಬರ್ 6 ಪೊಸಿಶನ್'ನಲ್ಲಿ 9 ಶತಕ ಭಾರಿಸುವ ಮೂಲಕ ಅಸದ್ ಈ ಸಾಧನೆ ಮಾಡಿದ್ದಾರೆ. ಗ್ಯಾರಿ ಸೋಬರ್ಸ್ ಆ ಸ್ಥಾನದಲ್ಲಿ 8 ಶತಕ ಭಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ನಾಳೆ ಪಂದ್ಯದ ಕೊನೆಯ ದಿನವಾಗಿದ್ದು, ಅಸದ್ ಶಫಿಕ್ ಅವರು ತಮ್ಮ ಕೆಚ್ಚೆದೆಯ ಪ್ರದರ್ಶನ ಮುಂದುವರಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುತ್ತಾರಾ ಎಂದು ಕಾದುನೋಡಬೇಕು.

ಸ್ಕೋರು ವಿವರ:

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 130.1 ಓವರ್ 429 ರನ್ ಆಲೌಟ್
(ಸ್ಟೀವ್ ಸ್ಮಿತ್ 130, ಪೀಟರ್ ಹ್ಯಾಂಡ್'ಸ್ಕೂಂಬ್ 105, ಮ್ಯಾಟ್ ರೇನ್'ಶಾ 71 ರನ್ - ವಹಾಬ್ ರಿಯಾಜ್ 89/4, ಮೊಹಮ್ಮದ್ ಅಮಿರ್ 97/4, ಯಾಸಿರ್ ಶಾ 129/2)

ಪಾಕಿಸ್ತಾನ ಮೊದಲ ಇನ್ನಿಂಗ್ಸ್ 55 ಓವರ್ 142 ರನ್ ಆಲೌಟ್
(ಸರ್ಫರಾಜ್ ಅಹ್ಮದ್ ಅಜೇಯ 59 ರನ್ - ಜೋಷ್ ಹೇಜಲ್'ವುಡ್ 22/3, ಜ್ಯಾಕ್ಸನ್ ಬರ್ಡ್ 23/3, ಮಿಶೆಲ್ ಸ್ಟಾರ್ಕ್ 63/3)

ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 202/5(ಡಿಕ್ಲೇರ್)
(ಉಸ್ಮಾನ್ ಖವಾಜ 74, ಸ್ಟೀವ್ ಸ್ಮಿತ್ 63, ಪೀಟರ್ ಹ್ಯಾಂಡ್ಸ್'ಕೂಂಬ್ ಅಜೇಯ 35 ರನ್ - ರಾಹತ್ ಅಲಿ 40/2)

ಪಾಕಿಸ್ತಾನ ಎರಡನೇ ಇನ್ನಿಂಗ್ಸ್ 123 ಓವರ್ 382/8
(ಅಸದ್ ಶಫಿಕ್ ಅಜೇಯ 100, ಅಜರ್ ಅಲಿ 71, ಯೂನಿಸ್ ಖಾನ್ 65, ಮೊಹಮ್ಮದ್ ಅಮಿರ್ 48, ವಹಾಬ್ ರಿಯಾಜ್ 30 ರನ್ - ಜ್ಯಾಕ್ಸನ್ ಬರ್ಡ್ 94/3, ಮಿಶೆಲ್ ಸ್ಟಾರ್ಕ್ 97/3, ನೇಥನ್ ಲಯೋನ್ 100/2)