ನವದೆಹಲಿ(ಅ. 05): ಅಹ್ಮದಾಬಾದ್'ನಲ್ಲಿ ನಡೆಯಲಿರುವ ಕಬಡ್ಡಿ ವಿಶ್ವಕಪ್'ನಲ್ಲಿ ಪಾಲ್ಗೊಳ್ಳದಂತೆ ಪಾಕಿಸ್ತಾನಕ್ಕೆ ಸೂಚಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ವಿಷಮ ಪರಿಸ್ಥಿತಿ ಇರುವುದರಿಂದ ಪಾಕಿಸ್ತಾನವು ಈ ಟೂರ್ನಿಯಲ್ಲಿ ಪಾಲ್ಗೊಳ್ಳದಿರುವುದು ಒಳ್ಳೆಯದು ಎಂದು ಅಂತಾರಾಷ್ಟ್ರೀಯ ಕಬಡ್ಡಿ ಒಕ್ಕೂಟದ ಮುಖ್ಯಸ್ಥ ದೇವರಾಜ್ ಚತುರ್ವೇದಿ ಹೇಳಿದ್ದಾರೆ. ಈ ಕ್ರೀಡಾಕೂಟದಲ್ಲಿ ಪಾಕಿಸ್ತಾನ ಪಾಲ್ಗೊಳ್ಳಲು ಇದು ಸಕಾಲವಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಒಕ್ಕೂಟದ ನಿರ್ಧಾರವನ್ನು ಪಾಕಿಸ್ತಾನ ಪ್ರಶ್ನಿಸಿದೆ. ಪಾಕಿಸ್ತಾನ ಪಾಲ್ಗೊಳ್ಳುವುದರಿಂದ ಭದ್ರತಾ ಸಮಸ್ಯೆ ಎದುರಾಗುತ್ತದೆ ಎಂದಾದಲ್ಲಿ ಎರಡೂ ದೇಶಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸಬಹುದಿತ್ತು ಎಂದು ಪಾಕಿಸ್ತಾನ ಹೇಳಿದೆ. ಬ್ರೆಜಿಲ್ ಇಲ್ಲದ ಫೀಫಾ ವರ್ಲ್ಡ್'ಕಪ್'ನಂತೆ, ಪಾಕಿಸ್ತಾನ ಇಲ್ಲದೇ ನಡೆಯುವ ಕಬಡ್ಡಿ ವಿಶ್ವಕಪ್ ಒಂದು ವಿಶ್ವಕಪ್ ಎನಿಸುವುದಿಲ್ಲ ಎಂದು ಪಾಕಿಸ್ತಾನದ ಕಬಡ್ಡಿ ಸಂಸ್ಥೆಯ ಕಾರ್ಯದರ್ಶಿ ರಾಣಾ ಮುಹಮ್ಮದ್ ಸಾರ್ವರ್ ಹೇಳಿದ್ದಾರೆ.
ಅ. 7ರಿಂದ 22ರವರೆಗೆ ನಡೆಯಲಿರುವ ಕಬಡ್ಡಿ ವಿಶ್ವಕಪ್'ನಲ್ಲಿ ಭಾರತ ಸೇರಿದಂತೆ 12 ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ತಲಾ 6 ತಂಡಗಳಂತೆ ಎರಡು ಗುಂಪುಗಳನ್ನು ಮಾಡಲಾಗಿದೆ. ಎ ಗುಂಪಿನಲ್ಲಿ ಭಾರತ, ಬಾಂಗ್ಲಾದೇಶ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಹಾಗೂ ಅರ್ಜೆಂಟೀನಾ ತಂಡಗಳಿವೆ. ಬಿ ಗುಂಪಿನಲ್ಲಿ ಇರಾನ್, ಅಮೆರಿಕಾ, ಪೋಲ್ಯಾಂಡ್, ಕೀನ್ಯಾ, ಥೈಲ್ಯಾಂಡ್ ಮತ್ತು ಜಪಾನ್ ದೇಶಗಳು ಕಾದಾಟ ನಡೆಸಲಿವೆ.
ಅಕ್ಟೋಬರ್ 7 ರಂದು ಮೊದಲ ಪಂದ್ಯ ನಡೆಯಲಿದ್ದು ಆತಿಥೇಯ ಭಾರತ ತಂಡವು ದಕ್ಷಿಣ ಕೋರಿಯಾವನ್ನು ಎದುರಿಸಲಿದೆ.
