ಅಬುಧಾಬಿ[ಡಿ.07]: ನಾಯಕ ಕೇನ್ ವಿಲಿಯಮ್ಸನ್ ಅಮೋಘ ಶತಕ, ಬೌಲರ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ನ್ಯೂಜಿಲೆಂಡ್ ತಂಡವು ಪಾಕಿಸ್ತಾನ ವಿರುದ್ಧ 123 ರನ್’ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರದ ಗೆಲುವಿನ ನಗೆ ಬೀರಿದೆ.

ಯಾಸಿರ್ ಶಾ ಮಾರಕ ದಾಳಿಯ ಹೊರತಾಗಿಯೂ ಕಿವೀಸ್ ತಂಡವು ಸುಮಾರು 10 ವರ್ಷಗಳ ಬಳಿಕ[2008] ಏಷ್ಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿದೆ. ಇನ್ನು 1969ರ ಬಳಿಕ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡವು ಪಾಕಿಸ್ತಾನದ ವಿರುದ್ಧ ತವರಿನಾಚೆ ಟೆಸ್ಟ್ ಸರಣಿ ಜಯಿಸಿದೆ. ಸ್ವಾರಸ್ಯಕರ ವಿಚಾರವೆಂದರೆ ಕೊನೆಯ ಬಾರಿಗೆ ಕಿವೀಸ್ ಏಷ್ಯಾ ನೆಲದಲ್ಲಿ ಸರಣಿ ಗೆದ್ದಾಗ ಅನುಭವಿ ಕ್ರಿಕೆಟಿಗ ರಾಸ್ ಟೇಲರ್ ಜನಿಸಿ ಕೇವಲ 21 ದಿನಗಳಾಗಿತ್ತು. ಇನ್ನು ನಾಯಕ ಕೇನ್ ವಿಲಿಯಮ್ಸನ್ ಆ ವೇಳೆ ಹುಟ್ಟೇ ಇರಲಿಲ್ಲ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್’ನಲ್ಲಿ 274 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ 348 ರನ್ ಬಾರಿಸಿತ್ತು. ಇನ್ನು ಕಿವೀಸ್ ಎರಡನೇ ಇನ್ನಿಂಗ್ಸ್’ನಲ್ಲಿ ಕೇನ್ ವಿಲಿಯಮ್ಸನ್[139] ಹಾಘೂ ಹೆನ್ರಿ ನಿಕೋಲೋಸ್ ಬಾರಿಸಿದ ಅಮೋಘ ಶತಕಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 353 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಬೃಹತ್ ಮೊತ್ತ ಬೆನ್ನತ್ತಿದ ಪಾಕಿಸ್ತಾನ ಕೇವಲ 156 ರನ್’ಗಳಿಗೆ ಸರ್ವಪತನ ಕಾಣುವುದರೊಂದಿಗೆ ಸರಣಿ ಕೈಚೆಲ್ಲಿತು.

ಟೂರ್ನಿಯುದ್ಧಕ್ಕೂ ಗಮನಾರ್ಹ ಪ್ರದರ್ಶನ ತೋರಿದ ಯಾಸಿರ್ ಶಾ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರೇ, ಕೇನ್ ವಿಲಿಯಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.