ನವದೆಹಲಿ[ಏ.04]: ಭಾರತ ಪುರುಷರ ಫುಟ್ಬಾಲ್‌ ತಂಡದ ಆಕರ್ಷಕ ಪ್ರದರ್ಶನ ವಿಶ್ವದ ಗಮನ ಸೆಳೆದಿದ್ದು, ಖಾಲಿ ಇರುವ ಪ್ರಧಾನ ಕೋಚ್‌ ಹುದ್ದೆಗೆ ಬರೋಬ್ಬರಿ 250 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಯುರೋಪ್‌ನ ಕೆಲ ಹೆಸರಾಂತ ಕೋಚ್‌ಗಳು ಸಹ ಭಾರತ ತಂಡದ ಮಾರ್ಗದರ್ಶಕರಾಗಲು ಆಸಕ್ತಿ ತೋರಿರುವುದು ವಿಶೇಷ.

ಎಎಫ್‌ಸಿ ಏಷ್ಯನ್‌ ಕಪ್‌ನಲ್ಲಿ ಭಾರತ ತಂಡ ಕ್ವಾರ್ಟರ್‌ ಫೈನಲ್‌ಗೇರಲು ವಿಫಲವಾದ ಹಿನ್ನೆಲೆಯಲ್ಲಿ ಸ್ಟೀಫನ್‌ ಕಾನ್ಸ್‌ಟೆಂಟೈನ್‌ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಬಳಿಕ ಪ್ರಧಾನ ಕೋಚ್‌ ಹುದ್ದೆ ಖಾಲಿ ಇದ್ದು, ಆ ಸ್ಥಾನಕ್ಕೆ ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಅರ್ಜಿ ಆಹ್ವಾನಿಸಿತ್ತು.

ಅರ್ಜಿ ಸಲ್ಲಿಸಿರುವವರ ಪೈಕಿ ಐಎಸ್‌ಎಲ್‌ ಹಾಗೂ ಐ-ಲೀಗ್‌ ಕ್ಲಬ್‌ಗಳ ಕೋಚ್‌ಗಳೂ ಇದ್ದಾರೆ. ಬೆಂಗಳೂರು ಎಫ್‌ಸಿ ತಂಡದ ಮಾಜಿ ಕೋಚ್‌ ಆಲ್ಬರ್ಟ್‌ ರೋಕಾ ಸಹ ಕೋಚ್‌ ಹುದ್ದೆಗೇರಲು ಮುಂಚೂಣಿಯಲ್ಲಿದ್ದಾರೆ. ಇಟಲಿಯ ಗಿಯೊವಾನಿ ಡೆ ಬಿಯಾಸಿ, ಸ್ವೀಡನ್‌ನ ಹಾಕನ್‌ ಎರಿಕ್ಸನ್‌, ಫ್ರಾನ್ಸ್‌ನ ರೇಮಂಡ್‌ ಡಾಮ್ನೆಕ್‌ ಹಾಗೂ ಇಂಗ್ಲೆಂಡ್‌ನ ಸ್ಯಾಮ್‌ ಅಲ್ಲಾರ್‌ಡೈಸ್‌ ಅರ್ಜಿ ಸಲ್ಲಿಸಿರುವ ಯುರೋಪ್‌ ಪ್ರಮುಖ ಕೋಚ್‌ಗಳೆನಿಸಿದ್ದಾರೆ. ಮಾ.29ರಂದು ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿತ್ತು. ಸದ್ಯದಲ್ಲೇ ಹೊಸ ಕೋಚ್‌ ನೇಮಕಗೊಳ್ಳಲಿದೆ ಎಂದು ಎಐಎಫ್‌ಎಫ್‌ ತಿಳಿಸಿದೆ.