Khelo India Youth Games: ಯೂತ್ ಗೇಮ್ಸ್‌ಗೆ ಅದ್ದೂರಿ ಚಾಲನೆ
ಇಂದಿನಿಂದ 13 ದಿನ ಖೇಲೋ ಇಂಡಿಯಾ ಕೂಟ
5ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಚಾಲನೆ
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಟವನ್ನು ಉದ್ಘಾಟನೆ
ಭೋಪಾಲ್(ಜ.31): 5ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಸೋಮವಾರ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅಧಿಕೃತ ಚಾಲನೆ ದೊರೆಯಿತು. ತಾತ್ಯಾ ಟೋಪೆ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕೂಟವನ್ನು ಉದ್ಘಾಟನೆ ಮಾಡಿದರು.
‘ಖೇಲೋ ಇಂಡಿಯಾ ಯೂತ್ ಗೇಮ್ಸ್ ಮುಂದಿನ ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ನಂತದ ವಿಶ್ವ ಕೂಟಗಳಿಗೆ ಭಾರತದ ಶ್ರೇಷ್ಠ ಅಥ್ಲೀಟ್‌ಗಳನ್ನು ತಯಾರಿಸಲಿದೆ. ಕೂಟದಲ್ಲಿ ಸ್ಪರ್ಧಿಸುತ್ತಿರುವ ಎಲ್ಲರಿಗೂ ಶುಭ ಹಾರೈಕೆಗಳು’ ಎಂದು ಚೌಹಾಣ್ ಹುರಿದುಂಬಿಸಿದರು. ಬಳಿಕ ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ನರೇಂದ್ರ ಮೋದಿ ಸರ್ಕಾರ ಮುಂದಿನ 5 ವರ್ಷದ ಖೇಲೋ ಇಂಡಿಯಾ ಯೋಜನೆಗೆ 3,200 ಕೋಟಿ ರು. ಮೀಸಲಿಟ್ಟಿದೆ. ದೇಶದಲ್ಲಿ ಕ್ರೀಡೆ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದರು. ಮಧ್ಯಪ್ರದೇಶ ಕ್ರೀಡಾ ಸಚಿವೆ ಯಶೋಧರಾ ಸಿಂಧಿಯಾ ರಾಜೆ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಕಾರ‍್ಯಕ್ರಮ:
ಬೆಳಕಿನ ಚಿತ್ತಾರಗಳಿಂದ ಕಂಗೊಳಿಸಿದ ಕ್ರೀಡಾಂಗಣದಲ್ಲಿ ಹಲವು ಸಾಂಸ್ಕೃತಿ ಕಾರ‍್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆಯಿತು. ವಿವಿಧ ನೃತ್ಯ ತಂಡಗಳು ಪ್ರದರ್ಶನ ನೀಡಿದರೆ, ತಾರಾ ಗಾಯಕರು ಹಾಡುಗಳ ಮೂಲಕ ನೆರೆದಿದ್ದವರನ್ನು ಮನರಂಜಿಸಿದರು. ದೇಶಭಕ್ತಿಯನ್ನು ಸಾರುವ ಮಕ್ಕಳ ನೃತ್ಯ ಕಾರ‍್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
6000+ ಅಥ್ಲೀಟ್‌ಗಳು:
ಕೂಟ ಇಂದೋರ್, ಗ್ವಾಲಿಯರ್ ಸೇರಿದಂತೆ ರಾಜ್ಯದ 8 ನಗರಗಳಲ್ಲಿ ಕೂಟ ಆಯೋಜನೆಗೊಳ್ಳಲಿದ್ದು, ಫೆ.11ರಂದು ಗೇಮ್ಸ್ ಮುಕ್ತಾಯಗೊಳ್ಳಲಿದೆ. ದೇಶದ ವಿವಿಧ ಕಡೆಗಳಿಂದ 6000ಕ್ಕೂ ಹೆಚ್ಚಿನ ಅಥ್ಲೀಟ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದೇ ಮೊದಲ ಬಾರಿ ರೋಯಿಂಗ್, ಕಯಾಕಿಂಗ್ ಸೇರಿದಂತೆ ಜಲ ಕ್ರೀಡೆಗಳನ್ನು ಸೇರ್ಪಡೆಗೊಳಿಸಲಾಗದೆ. ಮಲ್ಲಕಂಬ, ಕಳರಿಪಯಟ್ಟು, ಥಾಂಗ್ ಟಾ ಸೇರಿದಂತೆ ಒಟ್ಟು 27 ಕ್ರೀಡೆಗಳು ನಡೆಯಲಿವೆ.
ಇಂದಿನಿಂದ ಖೇಲೋ ಇಂಡಿಯಾ ಗೇಮ್ಸ್, ಮಧ್ಯ ಪ್ರದೇಶ ಆತಿಥ್ಯ
ವಸತಿ ವ್ಯವಸ್ಥೆ ಬಗ್ಗೆ ದೂರು
ಕೂಟದಲ್ಲಿ ಪಾಲ್ಗೊಳ್ಳುವ ಹಲವು ತಾಂತ್ರಿಕ ಅಧಿಕಾರಿಗಳಿಗೆ ಉಳಿದುಕೊಳ್ಳಲು ಹೋಟೆಲ್ ವ್ಯವಸ್ಥೆ ಮಾಡಲಾಗಿದ್ದರೂ, ಕೋಣೆಗಳು ಅವ್ಯವಸ್ಥೆಯಿಂದ ಕೂಡಿದೆ ಎಂದು ಹಲವು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾಗಿ ವರದಿಯಾಗಿದೆ. ಕೋಣೆಗಳಲ್ಲಿ ಸರಿಯಾಗಿ ಕುರ್ಚಿ, ಕನ್ನಡಿ ವ್ಯವಸ್ಥೆಯೂ ಇಲ್ಲ ಎಂದು ದೂರಿದ್ದಾರೆ. ಅಲ್ಲದೇ ಕರ್ನಾಟಕದ ಟೇಬಲ್ ಟೆನಿಸ್ ಆಟಗಾರರು ತಮಗೆ ಕಿಟ್‌ಗಳು ಸಿಗದ ಬಗ್ಗೆ ತಾಂತ್ರಿಕ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಟೇಬಲ್ ಟೆನಿಸ್: 33ನೇ ಸ್ಥಾನಕ್ಕೆ ಬಾತ್ರಾ
ನವದೆಹಲಿ: ಭಾರತದ ತಾರಾ ಟೇಬಲ್ ಟೆನಿಸ್ ಪಟು ಮನಿಕಾ ಬಾತ್ರಾ ವಿಶ್ವ ರ‍್ಯಾಂಕಿಂಗ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಜೀವನಶ್ರೇಷ್ಠ 33ನೇ ಸ್ಥಾನಕ್ಕೇರಿದ್ದಾರೆ. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಶರತ್ ಕಮಾಲ್ 2 ಸ್ಥಾನ ಮೇಲೇರಿ 46ನೇ ಸ್ಥಾನ ಪಡೆದಿದ್ದು, ಜಿ.ಸತ್ಯನ್ 40ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಿಶ್ರ ಡಬಲ್ಸ್ ಜೋಡಿ ಮನಿತಾ-ಸತ್ಯನ್ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.