ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಗೆ ಸಿದ್ಧತೆ ಆರಂಭಗೊಂಡಿದೆ. ಭಾರತದ ಬ್ಯಾಡ್ಮಿಂಟನ್ ತಾರೆಗಳು ಮತ್ತೆ ಕಣಕ್ಕಿಳಿಯುತ್ತಿದ್ದಾರೆ. ಈ ಬಾರಿ ಪಿವಿ ಸಿಂಧು,ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್‌ಗೆ ಎದುರಾಳಿ ಯಾರು? ಇಲ್ಲಿದೆ ವಿವರ.
ನವದೆಹೆಲಿ(ಜು.18): ಚೀನಾದ ನನ್ಜಿಂಗ್‌ನಲ್ಲಿ ಜುಲೈ 30 ರಿಂದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಆರಂಭವಾಗಲಿದ್ದು, ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು, ಸೈನಾ ನೆಹ್ವಾಲ್, ಎಚ್. ಎಸ್.ಪ್ರಣಯ್ ಮತ್ತು ಕಿದಾಂಬಿ ಶ್ರೀಕಾಂತ್‌ಗೆ ಕಠಿಣ ಸವಾಲು ಎದುರಾಗಲಿದೆ.
ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು ಹಾಗೂ ಸೈನಾಗೆ ಆರಂಭಿಕ ಪಂದ್ಯದಲ್ಲಿ ಬೈ ದೊರೆತಿದ್ದು, ನಂತರದಲ್ಲಿ ಕಠಿಣ ಸವಾಲು ಎದುರಿಸಬೇಕಿದೆ. ಸಿಂಧುಗೆ ಕ್ವಾರ್ಟರ್‌ನಲ್ಲಿ ಮತ್ತೆ ಹಾಲಿ ವಿಶ್ವ ಚಾಂಪಿಯನ್, ಜಪಾನ್‌ನ ಓಕುಹಾರಾ ಎದುರಾಗುವ ಸಾಧ್ಯತೆಗಳಿವೆ. ಇಂಡೋನೇಷ್ಯಾ ಓಪನ್ ಸೆಮಿಫೈನಲ್ ಮತ್ತು ಥಾಯ್ಲೆಂಡ್ ಓಪನ್ ಫೈನಲ್‌ನಲ್ಲಿ ಸಿಂಧು, ಓಕುಹಾರಾ ಎದುರು ಮುಗ್ಗರಿಸಿದ್ದರು. ಸಿಂಧು 2ನೇ ಸುತ್ತಿನಲ್ಲಿ ಗೆದ್ದರೆ ಕೊರಿಯಾದ ಸಂಗ್ ಜಿ ಹ್ಯೂನ್‌ರನ್ನು ಎದುರಿಸಲಿದ್ದಾರೆ.
ಕಾಮನ್‌ವೆಲ್ತ್ ಚಿನ್ನ ವಿಜೇತೆ ಸೈನಾ ನೆಹ್ವಾಲ್ 2ನೇ ಸುತ್ತಿನಲ್ಲಿ ಜಯ ಸಾಧಿಸಿದರೆ, ನಂತರ ಥಾಯ್ಲೆಂಡ್‌ನ ರಚನಾಕ್ ಇಂಟನನ್ ಅಥವಾ ಒಲಿಂಪಿಕ್ಸ್ ಚಿನ್ನ ವಿಜೇತೆ ಸ್ಪೇನ್‌ನ ಕ್ಯಾರೋಲಿನಾ ಮರಿನ್‌ರ ಕಠಿಣ ಸವಾಲು ಎದುರಿಸಬೇಕಿದೆ.
ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್, ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್‌ನ ನಾಟ್ಎಂಗ್ವೆನ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ೩ನೇ ಸುತ್ತಿಗೆ ಪ್ರವೇಶಿಸಿದರೆ, ಇಂಡೋನೇಷ್ಯಾದ ಜೋನಾಥನ್ ಕ್ರಿಸ್ಟಿ ಅವರ ಕಠಿಣ ಸವಾಲು ಎದುರಿಸಬೇಕಾಗುತ್ತದೆ. ಈ ಸವಾಲು ದಾಟಿದರೆ, ಶ್ರೀಕಾಂತ್‌ಗೆ ಮುಂದೆ ಮಲೇಷ್ಯಾದ ದಿಗ್ಗಜ ಲೀ ಚಾಂಗ್ ವೀ ಎದುರಾಗುವ ನಿರೀಕ್ಷೆ ಇದೆ.
ಪ್ರಣಯ್, ಪ್ರಣೀತ್, ಸಮೀರ್ ಸ್ಪರ್ಧಿಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಮನು-ಸುಮಿತ್. ಸಾತ್ವಿಕ್ -ಚಿರಾಗ್, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಎನ್.ಸಿಕ್ಕಿರೆಡ್ಡಿ ಕಣಕ್ಕಿಳಿಯಲಿದ್ದಾರೆ.
