ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂನಲ್ಲಿ ನೋವಾಕ್ ಜೋಕೋವಿಚ್ 100ನೇ ಗೆಲುವು ದಾಖಲಿಸಿದ್ದಾರೆ. ಈ ಸಾಧನೆ ಮಾಡಿದ 3ನೇ ಆಟಗಾರ ಎನಿಸಿಕೊಂಡ ಜೋಕೋವಿಚ್, ಪ್ರಿ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಡೆ ಮಿನೌರ್‌ ವಿರುದ್ಧ ಸೆಣಸಲಿದ್ದಾರೆ. 

ಲಂಡನ್‌: ದಿಗ್ಗಜ ಟೆನಿಸಿಗ, ಸರ್ಬಿಯಾದ ನೋವಾಕ್ ಜೋಕೋವಿಚ್‌ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ 100ನೇ ಗೆಲುವು ದಾಖಲಿಸಿದ್ದು, ಈ ಸಾಧನೆ ಮಾಡಿದ ಕೇವಲ 3ನೇ ಆಟಗಾರ ಎನಿಸಿಕೊಂಡಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಮಾರ್ಟಿನಾ ನವ್ರಾಟಿಲೋವಾ(120 ಗೆಲುವು) ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ರೋಜರ್‌ ಫೆಡರರ್‌(105) ಕೂಡಾ ಈ ವಿಶೇಷ ಮೈಲುಗಲ್ಲು ಸಾಧಿಸಿದ್ದಾರೆ.

ತಮ್ಮ 24 ಗ್ರ್ಯಾನ್‌ಸ್ಲಾಂ ಕಿರೀಟಗಳ ಪೈಕಿ ಏಳನ್ನು ವಿಂಬಲ್ಡನ್‌ನಲ್ಲಿ ಗೆದ್ದಿರುವ 38 ವರ್ಷದ ಜೋಕೋವಿಚ್‌, ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ತಮ್ಮದೇ ದೇಶದ ಮಿಯೋಮಿರ್‌ ಕೆಕಮನೋವಿಚ್‌ ವಿರುದ್ಧ 6-3, 6-0, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. 20ನೇ ಬಾರಿ ವಿಂಬಲ್ಡನ್‌ ಆಡುತ್ತಿರುವ ಜೋಕೋಗೆ ಪ್ರಿ ಕ್ವಾರ್ಟರ್‌ನಲ್ಲಿ ವಿಶ್ವ ನಂ.11, ಆಸ್ಟ್ರೇಲಿಯಾದ ಅಲೆಕ್ಸ್‌ ಡೆ ಮಿನೌರ್‌ ಸವಾಲು ಎದುರಾಗಲಿದೆ.

ಮಾಜಿ ಚಾಂಪಿಯನ್‌ ರಬೈಕೆನಾಗೆ ಸೋಲು

ಮಹಿಳಾ ಸಿಂಗಲ್ಸ್‌ನಲ್ಲಿ 2022ರ ಚಾಂಪಿಯನ್‌ ಎಲೆನಾ ರಬೈಕೆನಾ 3ನೇ ಸುತ್ತಿನಲ್ಲಿ ಸೋತು ಹೊರಬಿದ್ದರು. ಅವರಿಗೆ ಡೆನ್ಮಾರ್ಕ್‌ನ ಕ್ಲಾರಾ ಟಾಸನ್‌ ವಿರುದ್ಧ 6-7(6/8), 3-6 ನೇರ ಸೆಟ್‌ಗಳಲ್ಲಿ ಸೋಲು ಎದುರಾಯಿತು. ಅಮೆರಿಕದ 10ನೇ ಶ್ರೇಯಾಂಕಿತೆ ಎಮ್ಮಾ ನವಾರೊ, 7ನೇ ಶ್ರೇಯಾಂಕಿತೆ ಆ್ಯಂಡ್ರೀವಾ, ಪುರುಷರ ಸಿಂಗಲ್ಸ್‌ನಲ್ಲಿ ರಷ್ಯಾದ ಕರೇನ್‌ ಕಚನೋವ್‌, ಅಮೆರಿಕದ 5ನೇ ಶ್ರೇಯಾಂಕಿತ ಟೇಲರ್‌ ಫ್ರಿಟ್ಜ್‌, 10ನೇ ಶ್ರೇಯಾಂಕಿತ ಬೆನ್‌ ಶೆಲ್ಟನ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಕಣದಲ್ಲಿ ಉಳಿದ ಏಕೈಕ ಭಾರತೀಯ ಭಾಂಭ್ರಿ

ಈ ಬಾರಿ ವಿಂಬಲ್ಡನ್‌ನಲ್ಲಿ ಬಹುತೇಕ ಭಾರತೀಯರ ಸವಾಲು ಅಂತ್ಯಗೊಂಡಿದ್ದು, ಯೂಕಿ ಭಾಂಭ್ರಿ ಮಾತ್ರ ಉಳಿದುಕೊಂಡಿದ್ದಾರೆ. ಅಮೆರಿಕದ ರಾಬರ್ಟ್‌ ಗ್ಯಾಲೊವೇ ಜೊತೆಗೂಡಿ ಕಣಕ್ಕಿಳಿದಿದ್ದ ಯೂಕಿ ಭಾಂಭ್ರಿ ಪುರುಷರ ಡಬಲ್ಸ್‌ನಲ್ಲಿ 3ನೇ ಸುತ್ತಿಗೇರಿದ್ದಾರೆ. ಅವರು ಮಿಶ್ರ ಡಬಲ್ಸ್‌ನಲ್ಲಿ ಚೀನಾದ ಜಿಯಾಂಗ್‌ ಕ್ಷಿನ್‌ಯು ಜೊತೆಗೂಡಿ ಆಡುತ್ತಿದ್ದಾರೆ. ಇನ್ನು, ಪುರುಷರ ಡಬಲ್ಸ್‌ನಲ್ಲ ರಿಥ್ವಿಕ್‌ ಬೊಲ್ಲಿಪಲ್ಲಿ-ರೊಮಾನಿಯಾದ ನಿಕೋಲಸ್‌ ಬ್ಯಾರಿಯೆಂಟೋಸ್‌, ಶ್ರೀರಾಮ್‌ ಬಾಲಾಜಿ-ಮೆಕ್ಸಿಕೋದ ರೆಯೆಸ್‌ ವೆರೆಲಾ ಜೋಡಿ ಸೋತು ಹೊರಬಿದ್ದಿವೆ.

2029, 2031ರ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಶಿಪ್‌ಗೆ ಬಿಡ್‌ ಸಲ್ಲಿಸಲಿದೆ ಭಾರತ

ಬೆಂಗಳೂರು: 2029 ಹಾಗೂ 2031ರಲ್ಲಿ ನಡೆಯಬೇಕಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸುವ ದೇಶಗಳ ಬಿಡ್‌ ಪ್ರಕ್ರಿಯೆಯಲ್ಲಿ ಭಾರತ ಪಾಲ್ಗೊಳ್ಳಲಿದ್ದು, ಈ ವರ್ಷದ ಕೊನೆಯಲ್ಲಿ ಬಿಡ್‌ ಸಲ್ಲಿಕೆ ಮಾಡಲಿದೆ. ಎರಡು ಆವೃತ್ತಿಗಳ ಪೈಕಿ ಒಂದನ್ನಾದರೂ ಆಯೋಜಿಸುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌ ತಿಳಿಸಿದೆ. ಈ ಬಗ್ಗೆ ವಿಶ್ವ ಅಥ್ಲೆಟಿಕ್ಸ್‌ ಉಪಾಧ್ಯಕ್ಷ ಅಡಿಲ್ಲೆ ಸುಮರಿವಾಲ್ಲಾ ಮಾಹಿತಿ ನೀಡಿದ್ದು, ‘2029, 2031ರ ಎರಡೂ ಆವೃತ್ತಿಗಳ ಆತಿಥ್ಯವನ್ನು 2026ರ ಸೆಪ್ಟೆಂಬರ್‌ನಲ್ಲಿ ಘೋಷಿಸಲಾಗುತ್ತದೆ. ಬಿಡ್‌ ಸಲ್ಲಿಸಲು 2026ರ ಏಪ್ರಿಲ್‌ 1 ಕೊನೆಯ ದಿನ. ಎರಡು ಆವೃತ್ತಿಗಳಿಗೂ ನಾವು ಬಿಡ್‌ ಸಲ್ಲಿಸುತ್ತೇವೆ’ ಎಂದಿದ್ದಾರೆ.