ಗುವಾಹಟಿ(ಮಾ.08): ಹೆಚ್ಚುವರಿ ಸಮಯದಲ್ಲಿ (90+5ನೇ ನಿಮಿಷ) ನಾರ್ಥ್’ಈಸ್ಟ್‌ ಯುನೈಟೆಡ್‌ನ ಜುವಾನ್‌ ಮಸಿಯಾ ಬಾರಿಸಿದ ಗೋಲು, ಐಎಸ್‌ಎಲ್‌ 5ನೇ ಆವೃತ್ತಿಯ ಸೆಮಿಫೈನಲ್‌ ಮೊದಲ ಚರಣದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಸೋಲಿಗೆ ಕಾರಣವಾಯಿತು. 2-1 ಗೋಲುಗಳಿಂದ ಪಂದ್ಯ ಜಯಿಸಿದ ನಾರ್ಥ್’ಈಸ್ಟ್‌ ತಂಡ ಚೊಚ್ಚಲ ಬಾರಿಗೆ ಫೈನಲ್‌ಗೇರುವ ಕನಸು ಕಾಣುತ್ತಿದೆ. 

ಮಾ.11ರಂದು ಬೆಂಗಳೂರಲ್ಲಿ 2ನೇ ಚರಣದ ಪಂದ್ಯ ನಡೆಯಲಿದ್ದು, ಬಿಎಫ್‌ಸಿ 2 ಗೋಲುಗಳ ಅಂತರದಲ್ಲಿ ಜಯಿಸಬೇಕಿದೆ. 20ನೇ ನಿಮಿಷದಲ್ಲಿ ರೀಡಿಮ್‌ ಟ್ಲಾಂಗ್‌ ಬಾರಿಸಿದ ಗೋಲಿನ ನೆರವಿನಿಂದ ನಾರ್ಥ್’ಈಸ್ಟ್‌ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ 82ನೇ ನಿಮಿಷದಲ್ಲಿ ಕ್ಸಿಸ್ಕೋ ಹರ್ನೆಂಡೆಜ್‌ ಬಿಎಫ್‌ಸಿ ಸಮಬಲ ಸಾಧಿಸಲು ನೆರವಾದರು. 

ಇನ್ನು 93ನೇ ನಿಮಿಷದಲ್ಲಿ ಹರ್ಮನ್‌ಜೋತ್‌ ಖಾಬ್ರಾ ಚೌಕದೊಳಗೆ ತಪ್ಪು ಎಸೆಗಿದ ಕಾರಣ, ಎದುರಾಳಿಗೆ ಪೆನಾಲ್ಟಿಕಿಕ್‌ ಅವಕಾಶ ದೊರೆಯಿತು. ಇದರ ಸಂಪೂರ್ಣ ಲಾಭ ಪಡೆದ ನಾರ್ಥ್’ಈಸ್ಟ್‌  ತಂಡ ಗೆಲುವಿನ ಕೇಕೆ ಹಾಕಿತು.