ಏಷ್ಯನ್ ಗೇಮ್ಸ್‌ನಲ್ಲಿ ಶೂಟರ್ ನೀರು ಧಾಂಡಾ ಮೂರು ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟೀವಿ, ಸ್ಮಾರ್ಟ್‌ಫೋನ್ ಕೂಡ ಇಲ್ಲದ ಬಡ ಕುಟುಂಬದಿಂದ ಬಂದ ಇವರ ಸಾಧನೆ ದೇಶದ ಗಮನ ಸೆಳೆದಿದೆ. ಇವರ ಈ ಅದ್ಭುತ ಪ್ರದರ್ಶನದಿಂದ ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಏರಿದೆ.

ಈ ಬಾರಿ ಗೇಮ್ಸ್‌ನಲ್ಲಿ ಅವಳಿ ಚಿನ್ನ ಸೇರಿ 3 ಪದಕ ಗೆದ್ದ ನೀರು ಧಾಂಡಾ ದೇಶದ ಗಮನ ಸೆಳೆದಿದ್ದಾರೆ. ಟೀವಿ, ಸ್ಮಾರ್ಟ್‌ಫೋನ್‌ ಇಲ್ಲದ ಮನೆಯಲ್ಲಿ ಬೆಳೆದ ಅವರ ಸಾಧನೆ ಹಲವರಿಗೆ ಸ್ಫೂರ್ತಿಯಾಗಿದೆ. ಜತೆಗೆ ಮಗಳು ಚಿನ್ನ ಗೆದ್ದಿದ್ದರೂ ಕೂಡ ಅವರ ತಾಯಿಗೆ ಗೊತ್ತೇ ಇರಲಿಲ್ಲ ಎನ್ನುವ ಸಂಗತಿ ಬಯಲಾಗಿದೆ.

ಹೌದು, ನೀರು ಧಾಂಡಾ ತಾಯಿ ಸುದೇಶ್‌ ದೇವ್‌ ಹರ್ಯಾಣದಲ್ಲಿ ತಮ್ಮ ಮನೆ ಸಮೀಪ ಪಡಿತರ ಅಂಗಡಿಯಲ್ಲಿ ಬಿಪಿಎಲ್‌ ಕಾರ್ಡ್‌ ಹಿಡಿದು ರೇಷನ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಆಗ ಅವರ ಕೀಪ್ಯಾಡ್‌ ಫೋನ್‌ಗೆ ಒಬ್ಬರು ಕರೆ ಮಾಡಿ ನಿಮ್ಮ ಮಗಳು ಚಿನ್ನ ಗೆದ್ದಿದ್ದಾಳೆ ಎಂದಿದ್ದರು. ಆಗ ತಾಯಿಗೆ ಅದನ್ನು ಖಚಿತ ಪಡಿಸಿಕೊಳ್ಳುವುದಕ್ಕೆ ಮನೆಯಲ್ಲಿ ಟೀವಿ, ಸ್ಮಾರ್ಟ್‌ಫೋನ್ ಕೂಡ ಇರಲಿಲ್ಲ. ಅಲ್ಲದೇ ಮಗಳು ಏಷ್ಯಾಡ್‌ನಲ್ಲಿ ಸ್ಪರ್ಧಿಸುವುದು ಹಿಂದಿನ ದಿನವಷ್ಟೇ ಗೊತ್ತಾಗಿತ್ತು. ಬಳಿಕ ಟೀವಿ ಇದ್ದವರ ಮನೆಗೆ ಹೋಗಿ ಸುದ್ದಿ ನೋಡಿ ಮಗಳ ಸಾಧನೆ ನೋಡಿ ಸಂಭ್ರಮಿಸಿದ್ದಾರೆ.

ನೀರು ಧಾಂಡಾ-ಕಿನಾನ್‌ ಜೋಡಿಗೆ ಟ್ರ್ಯಾಪ್‌ ಸ್ವರ್ಣ

ಮಂಗಳವಾರ ವೈಯಕ್ತಿಕ ಚಿನ್ನ ಹಾಗೂ ಮಹಿಳಾ ತಂಡ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದ ಶೂಟರ್‌ ನೀರು ಧಾಂಡಾ, ಬುಧವಾರ ಮಿಶ್ರ ತಂಡ ವಿಭಾಗದ ಟ್ರ್ಯಾಪ್‌ನಲ್ಲಿ ಕಿನಾನ್‌ ಚೆನೈ ಜೊತೆಗೂಡಿ ಬಂಗಾರದ ಸಾಧನೆ ಮಾಡಿದರು. ಈ ಮೂಲಕ ಏಷ್ಯಾಡ್‌ನ ಈ ಆವೃತ್ತಿಯಲ್ಲಿ ಭಾರತದ ಅತ್ಯಂತ ಯಶಸ್ವಿ ಅಥ್ಲೀಟ್‌ ಎನಿಸಿಕೊಂಡರು.

ಫೈನಲ್‌ನಲ್ಲಿ ಧಾಂಡಾ-ಕಿನಾನ್‌ ಜೋಡಿ ಕತಾರ್‌ ವಿರುದ್ಧ ಗೆಲುವು ಸಾಧಿಸಿತು. 40 ಶಾಟ್‌ಗಳ ಪೈಕಿ ಭಾರತೀಯ ಜೋಡಿ 34ರಲ್ಲಿ ಯಶಸ್ವಿಯಾಗಿ ಗುರಿ ಇಟ್ಟರೆ, ಕತಾರ್‌ 32 ಯಶಸ್ವಿ ಶಾಟ್‌ಗಳೊಂದಿಗೆ 2ನೇ ಸ್ಥಾನಿಯಾಯಿತು. ಧಾಂಡಾ ತಮ್ಮ ಕೊನೆ 2 ಶಾಟ್‌ಗಳನ್ನು ತಪ್ಪಿಸಿಕೊಂಡರೂ ಅದರಿಂದ ಚಿನ್ನದ ಪದಕ ಗೆಲುವಿಗೆ ಅಡ್ಡಿಯಾಗಲಿಲ್ಲ.

ಗುಲ್ವೀರ್‌, ವಿದ್ಯಾ ನಂತರ ನೀರು ಧಾಂಡಾ ಹ್ಯಾಟ್ರಿಕ್

ಈ ಬಾರಿ ಭಾರತದ ಮೂವರು ಅಥ್ಲೀಟ್‌ಗಳು ತಲಾ 3 ಪದಕ ಸಾಧನೆ ಮಾಡಿದ್ದಾರೆ. ಮಂಗಳವಾರ ಗುಲ್ವೀರ್‌ ಸಿಂಗ್‌ ಹಾಗೂ ವಿದ್ಯಾ ರಾಮರಾಜ್‌ ಹ್ಯಾಟ್ರಿಕ್‌ ಪೂರೈಸಿದ್ದರು. ಅವರ ಪಟ್ಟಿಗೆ ಈಗ ನೀರು ಧಾಂಡಾ ಸೇರ್ಪಡೆಗೊಂಡಿದ್ದಾರೆ. ಟ್ರ್ಯಾಪ್‌ ಶೂಟಿಂಗ್‌ನಲ್ಲಿ ನೀರು ವೈಯಕ್ತಿಕ ಚಿನ್ನ, ಮಹಿಳಾ ವಿಭಾಗದ ಬೆಳ್ಳಿ ಹಾಗೂ ಮಿಶ್ರ ವಿಭಾಗದ ಚಿನ್ನ ಗೆದ್ದಿದ್ದಾರೆ.

ಮೆಡಲ್‌ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಿಗಿದ ಭಾರತ, ಟಾಪ್‌-5 ಕನಸು ಜೀವಂತ

ಈ ಬಾರಿ ಏಷ್ಯಾಡ್‌ನಲ್ಲಿ ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಿಗಿದಿದೆ. ಆರಂಭದಲ್ಲಿ ಅಗ್ರ-10ರಲ್ಲಿದ್ದರೂ ಇತ್ತೀಚೆಗಷ್ಟೇ 15ನೇ ಸ್ಥಾನಕ್ಕೆ ಕುಸಿದಿದ್ದ ಭಾರತ, ಬುಧವಾರ 4 ಚಿನ್ನ ಗೆಲ್ಲುವ ಮೂಲಕ ಮತ್ತೆ ಅಗ್ರ-10ಕ್ಕೆ ವಾಪಸ್‌ ಆಗಿದೆ. ಇದರೊಂದಿಗೆ ಅಗ್ರ-5ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಕನಸು ಜೀವಂತವಾಗಿದೆ. ಸದ್ಯ ಭಾರತ 10 ಚಿನ್ನ ಗೆದ್ದಿದ್ದರೆ, ಥಾಯ್ಲೆಂಡ್‌ 12, ಇರಾನ್‌, ಬಹರೇನ್‌ ತಲಾ 11 ಚಿನ್ನದೊಂದಿಗೆ ಪಟ್ಟಿಯಲ್ಲಿ ಕ್ರಮವಾಗಿ 5, 6, 7ನೇ ಸ್ಥಾನಗಳಲ್ಲಿವೆ.