ಸಿಡ್ನಿ(ಜು.10): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಇನ್ನೂ 5 ತಿಂಗಳು ಬಾಕಿ ಇದೆ. ಆದರೆ ಆಸಿಸ್ ಕ್ರಿಕೆಟಿಗರ ಮೈಂಡ್ ಗೇಮ್ ಈಗಿನಿಂದಲೇ ಶುರುವಾಗಿದೆ. ಈ ಬಾರಿಯೂ ಕೂಡ ಆಸ್ಟ್ರೇಲಿಯಾ ಕ್ರಿಕೆಟಿಗರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ ಟಾರ್ಗೆಟ್ ಮಾಡಿದ್ದಾರೆ.

ಮುಂಬರೋ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಲ್ಲ ಎಂದು ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ. ಆಸ್ಟ್ರೇಲಿಯಾದ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕಮಿನ್ಸ್ ತಮ್ಮ ಮೈಂಡ್ ಗೇಮ್ ಆಟ ಆರಂಭಿಸಿದ್ದಾರೆ.

2011ರ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಆಸಿಸ್ ನೆಲದಲ್ಲಿ ಸೆಂಚುರಿ ಸಿಡಿಸಿದ್ದರು. ಸರಣಿಯಲ್ಲಿ 300 ರನ್ ಸಿಡಿಸೋ ಮೂಲಕ ಭಾರತದ ಪರ ಗರಿಷ್ಠ ರನ್ ಸಿಡಿಸಿದ ಹೆಗ್ಗಳಿಗೆ ಪಾತ್ರರಾಗಿದ್ದರು. 2014ರ ಪ್ರವಾಸದಲ್ಲಿ ಕೊಹ್ಲಿ 4 ಸೆಂಚುರಿ ಹಾಗೂ 692 ರನ್ ಬಾರಿಸಿದ್ದರು. ಪ್ರತಿ ಬಾರಿ ವಿರಾಟ್ ಕೊಹ್ಲಿ ಆಸಿಸ್ ಕ್ರಿಕೆಟಿಗರಿಗೆ ತಲೆನೋವು ತಂದಿದ್ದಾರೆ.

2018ರ ಪ್ರವಾಸಕ್ಕೂ ಮುನ್ನ ಇದೀಗ ಆಸ್ಟ್ರೇಲಿಯಾ ಕ್ರಿಕೆಟಿಗರು ಮೈಂಡ್ ಗೇಮ್ ಶುರು ಮಾಡೋ ಮೂಲಕ ಟೀಂ ಇಂಡಿಯಾ ಆತ್ಮವಿಶ್ವಾಸ ಕುಗ್ಗಿಸಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಕೊಹ್ಲಿ ಬ್ಯಾಟ್ ಮೂಲಕವೇ ಉತ್ತರ ಕೊಡೋದು ಖಚಿತ.