ಯಾ ಗ್ರಾಂಡೆ (ಬ್ರೆಜಿಲ್): ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ ಸೋಲುಂಡ ಬಳಿಕ ನನ್ನಿಂದ ಫುಟ್ಬಾಲ್ ವೀಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬ್ರೆಜಿಲ್ ತಂಡದ ತಾರಾ ಆಟಗಾರ ನೇಯ್ಮರ್ ಹೇಳಿದ್ದಾರೆ.

‘ನಾನು ಮತ್ತೆ ಫುಟ್ಬಾಲ್ ಆಡುವುದಿಲ್ಲ ಎಂದು ಹೇಳುತ್ತಿಲ್ಲ. ಸದ್ಯದ ಪರಿಸ್ಥಿತಿಯ ಮಟ್ಟಿಗೆ ಚೆಂಡನ್ನು ನೋಡಲು ಅಥವಾ ಫುಟ್ಬಾಲ್ ಪಂದ್ಯಗಳನ್ನು ನೋಡಲು ಬಯಸುತ್ತಿಲ್ಲ’ ಎಂದು ನೇಯ್ಮರ್ ತಿಳಿಸಿದ್ದಾರೆ. ‘ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿನ ಬಳಿಕ ಬಹಳ ದುಃಖದಲ್ಲಿದ್ದೆ. ಆ ಬಗ್ಗೆ ನನಗೆ ತುಂಬಾ ಬೇಸರವಿದೆ. ಅದರಿಂದ ಹೊರಬರಬೇಕಿದೆ. ಏಕೆಂದರೆ, ನನ್ನ ಮಗನಿದ್ದಾನೆ, ನನ್ನ ಕುಟುಂಬ ಹಾಗೂ ಸ್ನೇಹಿತರಿದ್ದಾರೆ. ಅವರೆಲ್ಲಾ ನಾನು ವಿಷಾದದಲ್ಲಿರುವುದನ್ನು ನೋಡಲು ಬಯಸುವುದಿಲ್ಲ. ದುಃಖ ಪಡುವುದಕ್ಕಿಂತ ಖುಷಿಯಾಗಿರಲು ನನ್ನ ಬಳಿ ಸಾಕಷ್ಟು ಕಾರಣಗಳಿವೆ’ ಎಂದಿದ್ದಾರೆ.

ಇನ್ನು ರಿಯಲ್ ಮ್ಯಾಡ್ರಿಡ್ ಕ್ಲಬ್ ಸೇರ್ಪಡೆಯಾಗುವ ಕುರಿತ ಪ್ರಶ್ನೆಗೆ ನೇಯ್ಮರ್, ‘ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ. ನಾನು ಏನು ಮಾಡುತ್ತೇನೆ ಎಂಬುದಕ್ಕಿಂತ ಹೆಚ್ಚಿಗೆ ಮಾಧ್ಯಮಗಳಿಗೆ
ಗೊತ್ತು. ಇಂತಹ ಕಥೆಗಳಿಗೆ ನಾನು ಹೆಚ್ಚಿನ ಬೆಲೆ ಕೊಡುವುದಿಲ್ಲ’ ಎಂದು ಹೇಳಿದ್ದಾರೆ.