ಸಾವ್ ಪಾಲೋ[ಜು.31]: ಫಿಫಾ ವಿಶ್ವಕಪ್‌ನಲ್ಲಿ ತಾವು ಅತಿಯಾಗಿ ವರ್ತಿಸಿದ್ದಾಗಿ ಬ್ರೆಜಿಲ್ ತಂಡದ ನಾಯಕ ನೇಯ್ಮರ್ ಒಪ್ಪಿಕೊಂಡಿದ್ದಾರೆ. ತಾವು ರಾಯಭಾರಿಯಾಗಿರುವ ಸಂಸ್ಥೆಯೊಂದರ ಜಾಹೀರಾತಿನ ಮೂಲಕ ನೇಯ್ಮರ್ ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದು ಫುಟ್ಬಾಲ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. 

ವಿಶ್ವಕಪ್ ವೇಳೆ ನೇಯ್ಮರ್ ಮೈದಾನದಲ್ಲಿ ಉರುಳಾಡಿ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ಹಾಗೂ ಟ್ರೋಲ್‌ಗಳಿಗೆ ಒಳಗಾಗಿದ್ದರು. ನೇಯ್ಮರ್ ವರ್ತನೆಗೆ ಹಲವರು ಟೀಕಿಸಿದ್ದರು. ‘ನಾನು ಅತಿಯಾಗಿ ವರ್ತಿಸುತ್ತೇನೆ ಎಂದು ನೀವೆಲ್ಲಾ ಅಂದುಕೊಂಡಿರಬಹುದು. ಹೌದು ನಾನು ಹಾಗೆ ಮಾಡುತ್ತೇನೆ. ಆದರೆ ನನಗೆ ನೋವಾಗಿರುತ್ತದೆ ಎನ್ನುವುದು ಮಾತ್ರ ನಿಜ’ ಎಂದು ನೇಯ್ಮರ್ ಹೇಳಿದ್ದಾರೆ.

ನೇಮರ್ ಅವರಂತಹ ಸ್ಟಾರ್ ಆಟಗಾರರ ಹೊರತಾಗಿಯೂ ಬ್ರೆಜಿಲ್ ತಂಡ ಸೆಮಿಫೈನಲ್ ಹಂತ ಪ್ರವೇಶಿಸಲು ವಿಫಲವಾಗಿತ್ತು. ಕ್ರೊವೇಷಿಯಾವನ್ನು ಮಣಿಸಿ ಫ್ರಾನ್ಸ್ 2018ರ ಫಿಫಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.