2 ಪದಕ ಮತ್ತು ರಾಷ್ಟ್ರೀಯ ದಾಖಲೆ ಬಳಿಕ ನೀರಜ್ ಚೋಪ್ರಾ ನಿಜವಾದ ಪರೀಕ್ಷೆ ಇನ್ನು ಮುಂದೆ ಆರಂಭ..!
* ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಬಿಡುವಿನ ಬಳಿಕ ಭರ್ಜರಿ ಕಮ್‌ಬ್ಯಾಕ್
* ಈಗಾಗಲೇ ರಾಷ್ಟ್ರೀಯ ದಾಖಲೆ ಜತೆಗೆ ಎರಡು ಪದಕ ಜಯಿಸಿರುವ ನೀರಜ್ ಚೋಪ್ರಾ
* ಮುಂದಿನ ಆರು ವಾರಗಳಲ್ಲಿ ನೀರಜ್ ಚೋಪ್ರಾ ಮುಂದಿದೆ ಪ್ರಮುಖ ಮೂರು ಸವಾಲು
ನವದೆಹಲಿ(ಜೂ.22): ಅಥ್ಲೆಟಿಕ್ಸ್ ವಿಭಾಗದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾ (Neeraj Chopra) ಅವರ ಹೆಸರನ್ನು ಯಾರಾದರೂ ಮರೆಯಲು ಸಾಧ್ಯವೇ..? ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಫ್ರಾ ಸಾಕಷ್ಟು ಅಭ್ಯಾಸದ ಬಳಿಕ ಮತ್ತೆ ಮೈದಾನಕ್ಕಿಳಿದಿದ್ದು, ಈಗಾಗಲೇ ಒಂದು ಬೆಳ್ಳಿ ಹಾಗೂ ಒಂದು ಚಿನ್ನದ ಪದಕಕ್ಕೆ ಕೊರಳಿಡ್ಡಿದ್ದಾರೆ. ಇದರ ಜತೆಗೆ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಇದೆಲ್ಲದರ ಆಚೆಗೆ ಇನ್ನು ಮುಂದೆ ನೀರಜ್ ಚೋಪ್ರಾ ಅವರಿಗೆ ನಿಜವಾದ ಅಗ್ನಿ ಪರೀಕ್ಷೆ ಆರಂಭವಾಗಲಿದೆ. ನೀರಜ್ ಚೋಪ್ರಾ ಮುಂದಿನ ಹಾದಿ ಹೇಗಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ನೀಡುವ ಪ್ರಯತ್ನ ಹೀಗಿದೆ ನೋಡಿ
ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್ (Tokyo Olympics) ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 23 ವರ್ಷದವರಾಗಿದ್ದ ನೀರಜ್ ಚೋಪ್ರಾ, ಬರೋಬ್ಬರಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಐತಿಹಾಸಿಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಇಡೀ ದೇಶವೇ ನೀರಜ್ ಚೋಪ್ರಾ ಸಾಧನೆಯನ್ನು ಕೊಂಡಾಡಿತ್ತು. ಒಲಿಂಪಿಕ್ಸ್ ಚಾಂಪಿಯನ್ ಆಗಲು ಸಾಕಷ್ಟು ಕಠಿಣ ಪರಿಶ್ರಮಪಟ್ಟಿದ್ದ ನೀರಜ್ ಚೋಪ್ರಾ,ಇದಾದ ಬಳಿಕ ಕೊಂಚ ಸಮಯ ಸ್ಪರ್ಧೆ ಹಾಗೂ ಅಭ್ಯಾಸದಿಂದ ದೂರವೇ ಉಳಿದಿದ್ದರು. ಇದಾದ ಬಳಿಕ ನೀರಜ್ ಚೋಪ್ರಾ 14 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು.
ಕೆಲ ಕಾಲ ಬಿಡುವಿನ ಬಳಿಕ ಸತತ 6 ತಿಂಗಳುಗಳ ಕಾಲ ಚುಲ ವಿಸ್ತಾ, ಟರ್ಕಿ ಹಾಗೂ ಫಿನ್ಲೆಂಡ್‌ನಲ್ಲಿ ನೀರಜ್ ಚೋಪ್ರಾ ಅಭ್ಯಾಸ ನಡೆಸಿದ್ದಾರೆ. ನೀರಜ್ ಚೋಪ್ರಾ ಅವರ ತರಬೇತಿಗೆ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ(ಸಾಯ್) ಕೈ ಜೋಡಿಸಿದೆ. ಇದೆಲ್ಲದರ ಪರಿಣಾಮ ನೀರಜ್ ಚೋಪ್ರಾ ಟ್ರ್ಯಾಕ್ ಫೀಲ್ಡ್‌ಗೆ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದು, ರಾಷ್ಟ್ರೀಯ ದಾಖಲೆ ಸಹಿತ ಎರಡು ಪದಕ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂದಿನ ಆರು ವಾರಗಳಲ್ಲಿ ನೀರಜ್ ಚೋಪ್ರಾ ಮುಂದಿದೆ ಮೂರು ಮಹತ್ವದ ಟೂರ್ನಿ..!
ಫಿನ್ಲೆಂಡ್‌ನ ಪಾವೊ ನುರ್ಮಿ ಗೇಮ್ಸ್‌ನಲ್ಲಿ ಜೂನ್ ಮೊದಲ ವಾರದಲ್ಲಿ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 89.30 ದೂರಕ್ಕೆ ಜಾವೆಲಿನ್ ಎಸೆದು ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಈ ವರ್ಷದಲ್ಲೇ ತಾವು 90 ಮೀಟರ್ ದೂರ ಜಾವೆಲಿನ್ ಎಸೆಯುವ ಗುರಿ ಹೊಂದಿರುವುದಾಗಿ ದಿ ಕ್ವಿಂಟ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈ ವರ್ಷದಲ್ಲೇ ತಾವು 90 ಮೀಟರ್ ದೂರ ಜಾವೆಲಿನ್ ಎಸೆಯುವ ಪ್ರಯತ್ನ ನಡೆಸುತ್ತೇನೆ. ನಾನು ನನ್ನ ಮೊದಲ ಟೂರ್ನಿಯಲ್ಲೇ ಈ ಸಾಧನೆ ಮಾಡಬೇಕು ಎಂದುಕೊಂಡಿಲ್ಲ. ಆದರೆ ಪ್ರತಿ ಟೂರ್ನಿಯಲ್ಲಿ ನನ್ನಿಂದು ಎಷ್ಟು ಉತ್ತಮ ಸಾಧನೆ ಮಾಡಲು ಸಾಧ್ಯವೋ ಅದನ್ನು ಮಾಡಲು ಪ್ರಯತ್ನಿಸುತ್ತೇನೆ. ಇದೇ ಸಂದರ್ಭದಲ್ಲಿ ಟೂರ್ನಿ ನಡೆಯುವ ದಿನ ಹವಾಮಾನ ಹೇಗಿರುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ನನ್ನ ಪ್ರದರ್ಶನ ಈ ಎಲ್ಲಾ ಅಂಶಗಳನ್ನು ಅವಲಂಭಿಸಿರುತ್ತದೆ ಎಂದು ಚಿನ್ನದ ಹುಡುಗ ನೀರಜ್ ಚೋಪ್ರಾ ಹೇಳಿದ್ದಾರೆ.
Tokyo Olympics ಬಳಿಕ ಮತ್ತೊಂದು ಚಿನ್ನ ಗೆದ್ದ ನೀರಜ್ ಚೋಪ್ರಾ
ನೀರಜ್ ಚೋಪ್ರಾ ಈಗಾಗಲೇ ಫಿನ್ಲೆಂಡ್‌ನಲ್ಲಿ ಭಾಗವಹಿಸಿದ ಎರಡು ಟೂರ್ನಿಗಳಲ್ಲಿ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಮುರಿದಿದ್ದು, ಮುಂಬರುವ ಟೂರ್ನಿಗೆ ಭರ್ಜರಿ ಸಿದ್ದತೆ ನಡೆಸಿದ್ದಾರೆ ಎನ್ನುವುದಕ್ಕೆ ಪುರಾವೆ ನೀಡಿದಂತಿದೆ. ಮುಂದಿನ ಆರು ವಾರಗಳಲ್ಲಿ ನೀರಜ್ ಚೋಪ್ರಾ ಪ್ರಮುಖ ಮೂರು ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಪೈಕಿ ಸ್ಟಾಕ್‌ಹೋಮ್ ಡೈಮಂಡ್ ಲೀಗ್, ಕಾಮನ್‌ವೆಲ್ತ್ ಗೇಮ್ಸ್ ಹಾಗೂ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳ ಮೇಲೆ ನೀರಜ್ ಚೋಪ್ರಾ ಕಣ್ಣಿಟ್ಟಿದ್ದಾರೆ.
ಏನಿದು ಡೈಮಂಡ್ ಲೀಗ್ ಟೂರ್ನಿ?
ನೀರಜ್ ಚೋಪ್ರಾ ಮುಂದಿರುವ ಮೂರು ಸವಾಲುಗಳ ಪೈಕಿ ಮೊದಲ ಸವಾಲು ಡೈಮಂಡ್ ಲೀಗ್. ಇದು ಸ್ಟಾಕ್‌ಹೋಮ್‌ನಲ್ಲಿ ಜೂನ್ 30ರಂದು ಆರಂಭವಾಗಲಿದೆ. 2022ರಲ್ಲಿ ಒಟ್ಟು 13 ಡೈಮಂಡ್ ಲೀಗ್ ಟೂರ್ನಿಗಳು ನಡೆಯಲಿದ್ದು, ಈ ಪೈಕಿ 5 ಟೂರ್ನಿಗಳು ಪುರುಷರ ಜಾವೆಲಿನ್ ಥ್ರೋಗೆ ಸಂಬಂಧಿಸಿದವುಗಳಾಗಿವೆ. ಈಗಾಗಲೇ ಮೇ ತಿಂಗಳಿನಲ್ಲಿ ದೋಹಾದಲ್ಲಿ ಮೊದಲ ಡೈಮಂಡ್ ಲೀಗ್ ನಡೆದಿದ್ದು, ಇನ್ನೂ ನಾಲ್ಕು ಡೈಮಂಡ್ ಲೀಗ್‌ಗಳು ನಡೆಯಬೇಕಿದೆ. ಇದೀಗ ಸ್ಟಾಕೋಹೋಮ್, ಸಿಲಿಸಿಯಾ, ಮೊನ್ಯಾಕೊ ಹಾಗೂ ಲಾಸನ್ನೆಯಲ್ಲಿ ಇನ್ನುಳಿದ ನಾಲ್ಕು ಡೈಮಂಡ್ ಲೀಗ್‌ಗಳು ನಡೆಯಲಿವೆ.
ಇನ್ನು ಇದಾದ ಬಳಿಕ ಮಹತ್ತರವಾದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಕ್ರೀಡಾಕೂಟವು ಜುಲೈ ತಿಂಗಳಿನಲ್ಲಿ ನಡೆಯಲಿದೆ. ಅಮೆರಿಕದ ಒರೆಗಾನ್‌ನಲ್ಲಿ ಜುಲೈ 15ರಿಂದ ಜುಲೈ 24ರವರೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕ್ರೀಡಾಕೂಟ ಜರುಗಲಿದೆ. ಇನ್ನು ಇದಾದ ನಾಲ್ಕು ದಿನಗಳ ಬಳಿಕ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28ರಿಂದ ಆಗಸ್ಟ್ 08ರವರೆಗೆ ಕಾಮನ್‌ವೆಲ್ತ್ ಗೇಮ್ಸ್ ನಡೆಯಲಿದ್ದು, ಈ ಮೂರು ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.