ಲಕ್ಷ್ಮಣ್ ಆತ್ಮಕಥೆಯಲ್ಲಿ ಬಯಲಾಯ್ತು ಧೋನಿಯ ಮತ್ತೊಂದು ಮುಖ!
ಲಕ್ಷ್ಮಣ್ ತಮ್ಮ ಈ ಆತ್ಮಕಥೆಯಲ್ಲಿ ತನ್ನ ಸಹ ಆಟಗಾರರಿಗೆ ಸಂಬಂಧಿಸಿದ ಹಲವಾರು ರೋಚಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇವುಗಳಲ್ಲಿ ಒಂದು ಮಹೇಂದ್ರ ಸಿಂಗ್ ಧೋನಿಗೆ ಸಂಬಂಧಿಸಿದ ವಿಚಾರವನ್ನೂ ಬರೆದಿದ್ದಾರೆ.
ಇತ್ತೀಚೆಗೆ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ತನ್ನ ಆತ್ಮಕಥೆ '281 ಆ್ಯಂಡ್ ಬಿಯಾಂಡ್'ಗೆ ಸಂಬಂಧಿಸಿದಂತೆ ಚರ್ಚೆಯಲ್ಲಿದ್ದಾರೆ. ಲಕ್ಷ್ಮಣ್ ತಮ್ಮ ಈ ಆತ್ಮಕಥೆಯಲ್ಲಿ ತನ್ನ ಸಹ ಆಟಗಾರರಿಗೆ ಸಂಬಂಧಿಸಿದ ಹಲವಾರು ರೋಚಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇವುಗಳಲ್ಲಿ ಒಂದು ಮಹೇಂದ್ರ ಸಿಂಗ್ ಧೋನಿಗೆ ಸಂಬಂಧಿಸಿದ ವಿಚಾರವನ್ನೂ ಬರೆದಿದ್ದಾರೆ.
ಮಹಿ ಬಗ್ಗೆ ಬರೆದಿರುವ ಲಕ್ಷ್ಮಣ್ ನನ್ನೊಂದಿಗೆ ಸದಾ ಕಾಲವು ಉಳಿದುಕೊಳ್ಳುವ ಸವಿ ನೆನಪುಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾಗೆ ಮೀಸಲಿಟ್ಟ ಬಸ್ ಚಲಾಯಿಸಿದ್ದಾಗಿದೆ. ತನ್ನ 100ನೇ ಟೆಸ್ಟ್ ಮ್ಯಾಚ್ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಅಂದು ಧೋನಿ ನಾಗ್ಪುರದಿಂದ ಟೀಂ ಇಂಡಿಯಾ ಆಟಗಾರರಿದ್ದ ಬಸ್‌ನ್ನು ಹೊಟೇಲ್‌ವರೆಗೆ ಚಲಾಯಿಸಿಕೊಂಡು ಹೋಗಿದ್ದರು ಎಂದು ಬರೆದಿದ್ದಾರೆ.
'ಅಂದು ನನಗೆ ನನ್ನ ಕಣ್ಣುಗಳ ಮೇಲೆ ಭರವಸೆ ಮೂಡಲಿಲ್ಲ. ತಂಡದ ನಾಯಕ ಬಸ್ ಚಲಾಯಿಸಿ ನಮ್ಮನ್ನು ಮೈದಾನದಿಂದ ಹೊಟೇಲ್‌ಗೆ ಕರೆದೊಯ್ದಿದ್ದರು. ಅನಿಲ್ ಕುಂಬ್ಳೆ ನಿವೃತ್ತಿ ಬಳಿಕ ಅಂದು ಧೋನಿ ನಾಯಕತ್ವದಲ್ಲಿ ಆಡಿದ್ದ ಮೊದಲ ಟೆಸ್ಟ್ ಮ್ಯಾಚ್ ಆಗಿತ್ತು. ಅವರೊಬ್ಬ ಸರಳ, ಸಜ್ಜನ ವ್ಯಕ್ತಿಯಾಗಿದ್ದರು. ತಮಗಿಷ್ಟವಾದಂತೆ ಬದುಕುತ್ತಿದ್ದರು' ಎಂದು ಲಕ್ಷ್ಮಣ್ ಘಟನೆಯನ್ನು ವಿವರಿಸಿದ್ದಾರೆ.
ಕ್ರಿಕೆಟರ್‌ನಿಂದ ಕಮೆಂಟೇಟರ್ ಆದ ಲಕ್ಷ್ಮಣ್ ಅನ್ವಯ ಧೋನಿ ಯಾವತ್ತೂ ತಮ್ಮ ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ. ಹಾಗಂತ ಖುಷಿಯನ್ನೂ ಹೆಚ್ಚು ವ್ಯಕ್ತಪಡಿಸುತ್ತಿರಲಿಲ್ಲ. ಸಮತೋಲನ ಕಾಯ್ದುಕೊಳ್ಳುವ ವ್ಯಕ್ತಿಯಾಗಿದ್ದರು. 'ನಾನ್ಯಾವತ್ತೂ ಧೋನಿಯಂತಹ ವ್ಯಕ್ತಿಯನ್ನು ನೋಡಿಲ್ಲ. ಅವರು ಭಾರತೀಯ ತಂಡಕ್ಕೆ ಬಂದ ದಿನದಿಂದ ಅವರ ಕೋಣೆ ತೆರೆದೇ ಇರುತ್ತಿತ್ತು. ಯಾರು ಬೇಕಾದರೂ ಯಾವಾಗ ಬೇಕಾದರೂ ಹೋಗಬಹುದಿತ್ತು. ನನ್ನ ಕೊನೆಯ ಟೆಸ್ಟ್ ವೇಳೆಗೆ ಅವರೊಬ್ಬ ಯಶಸ್ವಿ ನಾಯಕರಾದ್ದರು. ಆಗಲೂ ಅವರು ನಿದ್ದೆ ಮಾಡುವಾಗ ಕೋಣೆಯ ಬಾಗಿಲು ಮುಚ್ಚುತ್ತಿರಲಿಲ್ಲ' ಎಂದಿದ್ದಾರೆ.
ಲಕ್ಷ್ಮಣ್ ತನ್ನ ನಿವೃತ್ತಿಗೆ ಸಂಬಂಧಿಸಿದ ವಿಚಾರಗಳನ್ನೂ ಬರೆದುಕೊಂಡಿದ್ದು 'ನಾನು ನಿವೃತ್ತಿ ಪಡೆದಿದ್ದೇನೆಂದು ಮಾಧ್ಯಮಗಳಿಗೆ ತಿಳಿಸಿದಾಗ, ನೀವು ಈ ಕುರಿತಾಗಿ ನಿಮ್ಮ ಸಹ ಆಟಗಾರರಿಗೆ ತಿಳಿಸಿದ್ದೀರಾ? ಎಂಬುವುದು ಮೊದಲ ಪ್ರಶ್ನೆಯಾಗಿತ್ತು. ಇದಕ್ಕೆ ನಾನು ಹೌದು ಎಂದು ಉತ್ತರಿಸಿದ್ದೆ. ಇದಾದ ಮರುಕ್ಷಣವೇ ನೀವು ಧೋನಿ ಬಳಿ ಈ ಬಗ್ಗೆ ಚರ್ಚಿಸಿದ್ದೀರಾ? ಎಂಬ ಎರಡನೇ ಪ್ರಶ್ನೆ ಎದುರಾಗಿತ್ತು. ಈ ವೇಳೆ ನಾನು ತಮಾಷೆಗೆಂದು ಧೋನಿ ಬಳಿ ತಲುಪುವುದು ಅದೆಷ್ಟು ಕಷ್ಟ ಎಂದು ಎಲ್ಲರಿಗೂ ತಿಳಿದಿದೆ ಎಂದು ಉತ್ತರಿಸಿದ್ದೆ. ಆದರೆ ನನ್ನ ಈ ತಮಾಷೆಯನ್ನು ಗಂಭೀರವಾಗಿ ಸ್ವೀಕರಿಸಿದ್ದ ಮಾಧ್ಯಮ ಮಂದಿ ಮರುದಿನ ಪ್ರಸಾರ ಮಾಡಿದ್ದ ಸುದ್ದಿಯಲ್ಲಿ ಧೋನಿಯೊಂದಿಗಿನ ಭಿನ್ನಾಭಿಪ್ರಾಯದಿಂದ ಲಕ್ಷ್ಮಣ್ ನಿವೃತ್ತಿ ಘೋಷಿಸಿದ್ದಾರೆ ಎಂದು ವರದಿ ಪ್ರಕಟಿಸಿದ್ದವು' ಎಂದು ಬರೆದಿದ್ದಾರೆ.
ಒಟ್ಟಾರೆಯಾಗಿ ಈವರೆಗೂ ಕೂಲ್ ಕ್ಯಾಪ್ಟನ್, ಸರಳ ವ್ಯಕ್ತಿ ಎಂಬ ವಿಚಾರ ಎಲ್ಲರಿಗೂ ತಿಳಿದಿತ್ತು. ಆದರೀಗ ಅವರ ಮತ್ತೊಂದು ಮುಖ ಬಯಲಾಗಿದ್ದು ತಂಡದ ಆಟಗಾರರಿಗಾಗಿ ಅವರು ಏನಡಲ್ಲಾ ಮಾಡುತ್ತಿದ್ದರು ಎಂಬುವುದು ಬಯಲಾಗಿದೆ. ಅಲ್ಲದೇ ವಿವಿಎಸ್ ಲಕ್ಷ್ಮಣ್ ನಿವೃತ್ತಿಗೆ ಧೋನಿಯೇ ಕಾರಣ ಎಂದು ಕಿಡಿ ಕಾರುತ್ತಿದ್ದವರಿಗೂ ಿಲ್ಲಿ ಉತ್ತರ ನೀಡಲಾಗಿದೆ. ಈ ಮೂಲಕ ಹಲವಾರು ವರ್ಷಗಳಿಂದ ಕಾಡುತ್ತಿದ್ದ ಗೊಂದಲಗಳಿಗೆ ತೆರೆ ಬಿದ್ದಿದೆ.