ಆರಂಭಿಕ ಬ್ಯಾಟ್ಸ್'ಮನ್ ಕಾಲಿನ್ ಮನ್ರೋ ಇಂದು ಅಕ್ಷರಶಃ ಆರ್ಭಟಿಸಿದರು. ಕೇವಲ 58 ಎಸೆತಗಳನ್ನು ಎದುರಿಸಿದ ಮನ್ರೋ 109 ರನ್ ಬಾರಿಸಿ ಅಜೇಯರಾಗುಳಿದರು.
ರಾಜ್'ಕೋಟ್(ನ.04): ಕಾಲಿನ್ ಮನ್ರೋ ಅವರ ಅಬ್ಬರದ ಶತಕದ ನೆರವಿನಿಂದ ನ್ಯೂಜಿಲೆಂಡ್ 196 ರನ್ ಕಲೆಹಾಕಿದ್ದು, ಟೀಂ ಇಂಡಿಯಾಗೆ ಸವಾಲಿನ ಗುರಿ ನೀಡಿದೆ.
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ವಿರಾಟ್ ಪಡೆಗೆ ಕಠಿಣ ಗುರಿ ನೀಡಿದೆ.
ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕಿವೀಸ್ ಪಡೆ ಮೊದಲ ವಿಕೆಟ್'ಗೆ ಶತಕದ ಜತೆಯಾಟವಾಡಿತು. ಮಾರ್ಟಿನ್ ಗುಪ್ಟಿಲ್ 45 ರನ್ ಬಾರಿಸಿ ಚಾಹಲ್'ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ನ್ಯೂಜಿಲೆಂಡ್ 11.1 ಓವರ್'ಗಳಲ್ಲಿ 105 ರನ್ ಕಲೆ ಹಾಕಿತ್ತು. ಮತ್ತೋರ್ವ ಆರಂಭಿಕ ಬ್ಯಾಟ್ಸ್'ಮನ್ ಕಾಲಿನ್ ಮನ್ರೋ ಇಂದು ಅಕ್ಷರಶಃ ಆರ್ಭಟಿಸಿದರು. ಕೇವಲ 58 ಎಸೆತಗಳನ್ನು ಎದುರಿಸಿದ ಮನ್ರೋ 109 ರನ್ ಬಾರಿಸಿ ಅಜೇಯರಾಗುಳಿದರು. ಅವರ ಸ್ಫೋಟಕ ಇನಿಂಗ್ಸ್'ನಲ್ಲಿ ತಲಾ 7 ಬೌಂಡರಿ ಹಾಗೂ 7 ಸಿಕ್ಸರ್ ಒಳಗೊಂಡಿದ್ದವು. ಅಂದಹಾಗೆ ಕಾಲಿನ್ ಮನ್ರೋಗಿದು ಟಿ20 ಕ್ರಿಕೆಟ್'ನಲ್ಲಿ ಎರಡನೇ ಶತಕವಾಗಿದೆ.
ಪದಾರ್ಪಣೆ ಮಾಡಿದ ಸಿರಾಜ್:
ಹೈದರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ಇಂದು ಅಂತರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲೇ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಬೌಲಿಂಗ್'ನಲ್ಲಿ ಸಿರಾಜ್ ತುಂಬಾ ದುಬಾರಿಯೆನಿಸಿದರು. 4 ಓವರ್ ಬೌಲಿಂಗ್ ಮಾಡಿದ ಸಿರಾಜ್ 53 ರನ್ ಬಿಟ್ಟುಕೊಟ್ಟರು.
ಪಂದ್ಯ ಪ್ರಾರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವಾಗ ಆಟೋ ಚಾಲಕರ ಮಗನಾಗಿರುವ ಸಿರಾಜ್ ಭಾವುಕರಾಗಿದ್ದು ಸಾಕಷ್ಟು ಗಮನ ಸೆಳೆಯಿತು.
ಸಂಕ್ಷಿಪ್ತ ಸ್ಕೋರ್:
ನ್ಯೂಜಿಲೆಂಡ್ : 196/2
ಕಾಲಿನ್ ಮನ್ರೋ: 109*
ಮಾರ್ಟಿನ್ ಗುಪ್ಟಿಲ್: 45
ಯುಜುವೇಂದ್ರ ಚಾಹಲ್ : 36/1
