ವೆಲ್ಲಿಂಗ್ಟನ್[ಮಾ.11]: ಕ್ಷೇತ್ರರಕ್ಷಣೆ ಮಾಡುವ ವೇಳೆ ಭುಜದ ನೋವಿಗೆ ತುತ್ತಾಗಿರುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಂಗ್ಲಾದೇಶ-ನ್ಯೂಜಿಲೆಂಡ್ ನಡುವೆ ವೆಲ್ಲಿಂಗ್ಟನ್’ನ ಬೇಸಿನ್ ರಿಸರ್ವ್’ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ವೇಳೆ ವಿಲಿಯಮ್ಸನ್ ಎಡಗೈ ಭುಜದ ಗಾಯಕ್ಕೆ ತುತ್ತಾಗಿದ್ದು, ಗಾಯದ ತೀವ್ರತೆ ತಿಳಿದುಬಂದಿಲ್ಲ. ಮುಂಜಾಗೃತ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕಿವೀಸ್ ತಂಡದ ಅಧಿಕಾರಿಗಳು ತಿಳಿಸಿದ್ದಾರೆ. 

ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಶಾಕ್- ಸ್ಟಾರ್ ಕ್ರಿಕೆಟಿಗ ಔಟ್?

ಬಾಂಗ್ಲಾದೇಶ ವಿರುದ್ಧ ಮೊದಲ ಇನ್ನಿಂಗ್ಸ್’ನಲ್ಲಿ ಕ್ಷೇತ್ರರಕ್ಷಣೆ ಮಾಡುವಾಗ ವಿಲಿಯಮ್ಸನ್ ಗಾಯಕ್ಕೆ ತುತ್ತಾಗಿದ್ದರು. ಆದರೂ ನ್ಯೂಜಿಲೆಂಡ್ ಪರ ಮೊದಲ ಇನ್ನಿಂಗ್ಸ್’ನಲ್ಲಿ ಬ್ಯಾಟಿಂಗ್ ಇಳಿದ ವಿಲಿಯಮ್ಸನ್ 74 ರನ್ ಬಾರಿಸಿ ಗಮನ ಸೆಳೆದರು. ಬಾಂಗ್ಲಾ ಸ್ಪಿನ್ನರ್ ತೈಜುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸುವ ಮುನ್ನ ವಿಲಿಯಮ್ಸನ್ 30ನೇ ಟೆಸ್ಟ್ ಅರ್ಧಶತಕ ಪೂರೈಸಿದರು. ಗಾಯದ ಸಮಸ್ಯೆಯಿಂದಾಗಿ ಎರಡೆರಡು ಬಾರಿ ತೊಡಕು ಎದುರಿಸಿದ ವಿಲಿಯಮ್ಸನ್ ಕೊನೆಗೂ ತೈಜುಲ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. 

ಎರಡನೇ ಟೆಸ್ಟ್’ನ ಮೊದಲೆರಡು ದಿನ ಮಳೆಯಿಂದಾಗಿ ಪಂದ್ಯ ರದ್ದಾಗಿತ್ತು. ಮೂರನೇ ದಿನ ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ ಕೇವಲ 211 ರನ್’ಗಳಿಗೆ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್ ರಾಸ್ ಟೇಲರ್ ಆಕರ್ಷಕ ದ್ವಿಶತಕದ ನೆರವಿನಿಂದ 432 ರನ್ ಬಾರಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶ 4ನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 80 ರನ್ ಬಾರಿಸಿದ್ದು, ಇನ್ನೂ 141 ರನ್’ಗಳ ಹಿನ್ನಡೆಯಲ್ಲಿದೆ. 

ಪಾಕಿಸ್ತಾನಕ್ಕೆ ಮತ್ತೊಂದು ಶಾಕ್- PSL ಟೂರ್ನಿಯಿಂದ ಡಿವಿಲಿಯರ್ಸ್ ವಾಪಾಸ್!

ಉಭಯ ತಂಡಗಳ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆತಿಥೇಯ ನ್ಯೂಜಿಲೆಂಡ್ ಇನ್ನಿಂಗ್ಸ್ ಮತ್ತು 52 ರನ್’ಗಳಿಂದ ಜಯಭೇರಿ ಬಾರಿಸಿ 1-0 ಮುನ್ನಡೆ ಕಾಯ್ದುಕೊಂಡಿದೆ.