ನವದೆಹಲಿ[ಸೆ.20]: ಭಾರತದಲ್ಲಿ ಕಬಡ್ಡಿಯ ಜನಪ್ರಿಯತೆಯನ್ನು ಆಗಸದೆತ್ತರಕ್ಕೆ ಕೊಂಡೊಯ್ದ ಪ್ರೊ ಕಬಡ್ಡಿ ಲೀಗ್‌ಗೆ ಪರ್ಯಾಯವಾಗಿ ಮತ್ತೊಂದು ಲೀಗ್ ಹುಟ್ಟಿಕೊಳ್ಳುತ್ತಿದೆ. ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆದಿರುವ ಭಾರತೀಯ ಅಮೆಚೂರ್ ಕಬಡ್ಡಿ ಸಂಸ್ಥೆ ಆಶ್ರಯದಲ್ಲಿ ನಡೆಯತ್ತಿರುವ ಪ್ರೊ ಕಬಡ್ಡಿ ಲೀಗ್‌ಗೆ ಬಂಡಾಯ ಸಂಸ್ಥೆ ನ್ಯೂ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ ಸವಾಲೆಸೆಯಲು ಸಜ್ಜಾಗಿದೆ.

2019ರ ಜ.26ರಿಂದ ಇಂಡೋ-ಇಂಟರ್ ನ್ಯಾಷನಲ್ ಕಬಡ್ಡಿ ಪ್ರೀಮಿಯರ್ ಲೀಗ್ ಹೆಸರಿನ ಹೊಸ ಪಂದ್ಯಾವಳಿ ಆರಂಭಿಸುವುದಾಗಿ ಫೆಡರೇಷನ್ ಬುಧವಾರ ಘೋಷಿಸಿದೆ. ಲೀಗ್‌ನಲ್ಲಿ ಬೆಂಗಳೂರು ರೈನೋಸ್, ಚೈನ್ನೈ ಚೀತಾಸ್, ಡೆಲ್ಲಿ ದುಮಾರ್ಸ್‌, ತೆಲಂಗಾಣ ಬುಲ್ಸ್, ಪಾಟ್ನಾ ಪ್ಯಾಂಥರ್ಸ್‌, ಹರ್ಯಾಣ ಹರಿಕೇನ್ಸ್, ಮುಂಬೈ ಮರಾಠಾಸ್ ಹಾಗೂ ಕೋಲ್ಕತಾ ಟೈಗರ್ಸ್‌ ಎಂಬ 8 ತಂಡಗಳು ಇರಲಿವೆ. ಜ.5ರಂದು ತಂಡಗಳಿಗೆ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಪ್ಲೇಯರ್ ಡ್ರಾಫ್ಟ್’ನಲ್ಲಿ 1000ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ 823 ಭಾರತೀಯರು ಇರಲಿದ್ದಾರೆ. ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಒಟ್ಟು 62 ಪಂದ್ಯಗಳು ನಡೆಯಲಿವೆ. ಅಗ್ರ 4 ತಂಡಗಳು ಪ್ಲೇ-ಆಫ್‌ಗೆ ಪ್ರವೇಶ ಪಡೆಯಲಿವೆ. ಟೂರ್ನಿಯ ಒಟ್ಟು ಪ್ರಶಸ್ತಿ ಮೊತ್ತ ₹1.25 ಕೋಟಿ ಆಗಿರಲಿದೆ.

ಇದನ್ನು ಓದಿ:  ಪ್ರೊ ಕಬಡ್ಡಿ ವೇಳಾಪಟ್ಟಿ ಮತ್ತೆ ಬದಲು..!

ವಿದೇಶಿಗರ ದಂಡು: ನೂತನ ಲೀಗ್‌ನ ಆಯ್ಕೆ ಪ್ರಕ್ರಿಯೆಯಲ್ಲಿ ನ್ಯೂಜಿಲೆಂಡ್, ಪೋಲೆಂಡ್, ಅರ್ಜೆಂಟೀನಾ, ತಾಂಜೇನಿಯಾ, ಆಸ್ಟ್ರೇಲಿಯಾ, ನಾರ್ವೆ, ಬ್ರಿಟನ್, ಕೆನಡಾ, ಅಮೆರಿಕ, ಆಫ್ಘಾನಿಸ್ತಾನ, ಪಾಕಿಸ್ತಾನ, ಇರಾನ್, ಬಾಂಗ್ಲಾದೇಶ, ಶ್ರೀಲಂಕಾ, ಮೆಕ್ಸಿಕೋ, ಮಾರಿಷಸ್, ಕೀನ್ಯಾ, ಇರಾಕ್, ಡೆನ್ಮಾರ್ಕ್‌ನ ಆಟಗಾರರು ಭಾಗಿಯಾಗಲಿದ್ದಾರೆ. ಪ್ರತಿ ತಂಡಕ್ಕೆ 2ರಿಂದ 3 ವಿದೇಶಿ ಆಟಗಾರರನ್ನು ಖರೀದಿ ಮಾಡುವ ಅವಕಾಶವಿದೆ. ಇಂಡೋ-ಇಂಟರ್ ನ್ಯಾಷನಲ್ ಲೀಗ್ ಪಂದ್ಯಗಳು ಡಿಸ್ಪೋರ್ಟ್ಸ್’ನಲ್ಲಿ ನೇರ ಪ್ರಸಾರವಾಗಲಿದೆ.